ಎಸ್‌ಕೆಎಸ್‌ಎಸ್‌ಎಫ್ ಪುತ್ತೂರು ವಲಯದಿಂದ ಪ್ರತಿಭಟನೆ
ಪುತ್ತೂರು, ಎ. 20: ಕಥುವಾ ಎಂಬಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೈಯಲ್ಪಟ್ಟ 8ರ ಹರೆಯದ ಬಾಲಕಿ ಪ್ರಕರಣವನ್ನು ಖಂಡಿಸಿ ಎಸ್‌ಕೆಎಸ್‌ಎಸ್‌ಎಫ್ ಪುತ್ತೂರು ವಲಯದ ವತಿಯಿಂದ ಇಲ್ಲಿನ ಬಸ್ಸು ನಿಲ್ದಾಣದ ಬಳಿಯಲ್ಲಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ರಾಜ್ಯ ದಾರಿಮೀಸ್ ಎಸೋಸಿಯೇಷನ್ ಅಧ್ಯಕ್ಷರಾದ ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿ ಅವರು ಮಾತನಾಡಿ ಪವಿತ್ರವಾದ ದೇವಸ್ಥಾನದಲ್ಲಿ ಅದರ ಅರ್ಚಕ ಮತ್ತು ಪೊಲೀಸ್ ಸಿಬ್ಬಂದಿ ಸಮೇತ ಹಲವರಿಂದ ನಿರಂತರ ಅತ್ಯಾಚಾರಕ್ಕೆ ಒಳಗಾಗಿ ಕ್ರೂರವಾಗಿ ಕೊಲೆಗೈಯಲ್ಪಟ್ಟ ಬಾಲಕಿ ಪ್ರಕರಣ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದು, ಭಾರತ ಇಡೀ ಜಗತ್ತಿನಲ್ಲಿಯೇ ತಲೆ ತಗ್ಗಿಸುವಂತಾಗಿದೆ. ಪ್ರಕರಣದ ಬಗ್ಗೆ ಪ್ರಧಾನಿ ಮೋದಿ ಮೌನ ಮುರಿದು ಮಾತನಾಡ ಬೇಕಾಗಿದೆ ಎಂದು ಹೇಳಿದರು.
ರಾಜ್ಯ ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಹಾಗೂ ಕುಂಬ್ರ ಕೆಐಸಿಯ ಮೆನೇಜರ್ ಅನೀಸ್ ಕೌಸರಿ ಮಾತನಾಡಿ ಪ್ರಕರಣದಲ್ಲಿ ಸಕಾರಾತ್ಮಕವಾಗಿ ಮಾನವೀಯತೆಯಿರುವ ಹಿಂದೂ ಸಹೋದರರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಮಾನವೀಯ ಮೌಲ್ಯಗಳ ಪ್ರತಿಪಾದನೆಯಿಂದ ವಿಶ್ವದಲ್ಲಿ ಭಾರತಕ್ಕೆ ಸ್ಥಾನಮಾನ ಗೌರವವಿತ್ತು. ಹಿಂದೂ ಧರ್ಮಗಳ ತತ್ವ ಸಿದ್ದಾಂತ ಕೂಡಾ ಮಾನವೀಯ ಮೌಲ್ಯಗಳಿಗೆ ಒತ್ತು ನೀಡುವುದಾಗಿದೆ. ಆದರೆ ಆ ಧರ್ಮ ವನ್ನು ಗುತ್ತಿಗೆ ಪಡೆದುಕೊಂಡವರಂತೆ ವರ್ತಿಸುತ್ತಿರುವ ಕೆಲ ರಾಜಕೀಯ ಪ್ರೇರಿತ ಶಕ್ತಿಗಳಿಂದಾಗಿ ಭಾರತ ವಿಶ್ವ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕೂರ್ನಡ್ಕ ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಮುಹಮ್ಮದ್ ಮುಸ್ಲಿಯಾರ್ ಅಜ್ಜಿಕಟ್ಟೆ, ಅಶ್ರಫ್ ದಾರಿಮಿ ಸಂಟಿಯಾರ್, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಯು. ಅಬ್ದುಲ್ಲ ಹಾಜಿ, ಕಾರ್ಯದರ್ಶಿ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಮುಫತ್ತಿಸ್ ಉಮ್ಮರ್ ದಾರಿಮಿ ಸಾಲ್ಮರ, ಸಾಲ್ಮರ ಸೈಯದ್ ಮಲೆ ಮಸೀದಿ ಖತೀಬ್ ಉಮ್ಮರ್ ದಾರಿಮಿ, ಶುಕೂರ್ ದಾರಿಮಿ, ಉಮ್ಮರ್ ಫೈಝಿ ಅಜ್ಜಿಕಟ್ಟೆ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಮಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಸಾಲ್ಮರ ಮುಹಮ್ಮದ್ ಶರೀಫ್, ಅಬೂಬಕರ್ ಮುಲಾರ್, ಅಬ್ದುಲ್ ಹಮೀದ್ ಮುಸ್ಲಿಯಾರ್ ದರ್ಬೆ, ವಕ್ಫ್ ಸದಸ್ಯ ಯಾಕೂಬ್ ಹಾಜಿ ದರ್ಬೆ, ಇಸ್ಮಾಯಿಲ್ ಸಾಲ್ಮರ, ಅಶ್ರಫ್ ಮುಕ್ವೆ, ಅಬ್ದುಲ್ ರಝಾಕ್ ಪಡೀಲ್, ನಝೀರ್ ಅರ್ಶದಿ, ಮನ್ಸೂರ್ ಮೌಲವಿ, ನಾಸಿರ್ ದಾರಿಮಿ, ರಝಾಕ್ ಅರ್ಹರಿ, ಸಿದ್ದೀಕ್ ಸುಲ್ತಾನ್, ಯೂಸುಫ್ ಕೂರ್ನಡ್ಕ, ಫಾರೂಕ್ ಸಂಟ್ಯಾರ್, ಎಂ.ಎ. ಹುಸೈನ್ ಕೆನರಾ ಸಹಿತ ನೂರಾರು ಮಂದಿ ಭಾಗವಹಿಸಿದ್ದರು.