ಕಠ್ಮಂಡು: ರನ್‌ವೇಯಿಂದ ಹೊರಗೆ ಜಾರಿದ ವಿಮಾನ
ಕಠ್ಮಂಡು (ನೇಪಾಳ), ಎ. 20: ನೇಪಾಳದ ಏಕೈಕ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ವಿಮಾನವೊಂದು ಹಾರಾಟ ನಡೆಸುತ್ತಿದ್ದಾಗ ರನ್‌ವೇಯಿಂದ ಹೊರಗೆ ಜಾರಿದೆ. ಈ ಘಟನೆಯ ಬಳಿಕ ದಿನದ ಮಟ್ಟಿಗೆ ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು.
ಮಲಿಂಡೊ ಏರ್ ಕಂಪೆನಿಯ ಬೋಯಿಂಗ್ 737 ವಿಮಾನವು ಗುರುವಾರ ರಾತ್ರಿ ಹಾರಾಟ ನಡೆಸುತ್ತಿದ್ದಾಗ ರನ್‌ವೇಯ ಕೊನೆಯಲ್ಲಿ ಹುಲ್ಲಿರುವ ಸ್ಥಳಕ್ಕೆ ಜಾರಿದೆ, ಆದರೆ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ತ್ರಿಭುವನ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ತಿಳಿಸಿದೆ.
ವಿಮಾನವನ್ನು ಸರಿದಾರಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅದು ಹೇಳಿದೆ.
ಶುಕ್ರವಾರದ ಎಲ್ಲ ವಿಮಾನ ಹಾರಾಟಗಳನ್ನು ರದ್ದುಪಡಿಸಲಾಗಿದೆ. ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣ ಟರ್ಮಿನಲ್‌ನ ಹೊರಗೆ ಕಾಯುತ್ತಿದ್ದಾರೆ.
ಮಲೇಶ್ಯದ ವಿಮಾನಯಾನ ಸಂಸ್ಥೆಯಾಗಿರುವ ಮಲಿಂಡೊ ಏರ್, ಕೌಲಾಲಂಪುರ ಮತ್ತು ಕಠ್ಮಂಡು ನಡುವೆ ನಿಯಮಿತವಾಗಿ ಹಾರಾಟ ನಡೆಸುತ್ತಿದೆ.
ಕಳೆದ ತಿಂಗಳು ಬಾಂಗ್ಲಾದೇಶದ ಪ್ರಯಾಣಿಕ ವಿಮಾನವೊಂದು ಇದೇ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ನಡೆಸುತ್ತಿದ್ದ ವೇಳೆ ಪತನಗೊಂಡಿದ್ದು 49 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ.