ಮಂಗಳೂರು ಉತ್ತರ ಬಿಜೆಪಿ ಕ್ಷೇತ್ರ ಅಭ್ಯರ್ಥಿ ಪ್ರೊ.ವೈ. ಭರತ್ ಶೆಟ್ಟಿ
ಮಂಗಳೂರು, ಎ.20: ನಗರದ ಯೆಯ್ಯಿಡಿಯ ನಿವಾಸಿಯಾಗಿರುವ ಪ್ರೊ.ಡಾ.ವೈ. ಭರತ್ ಶೆಟ್ಟಿ (45) ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದವರು.
ಆರೆಸೆಸ್‌ನಲ್ಲಿ ಐಟಿಸಿ ಮತ್ತು ಒಟಿಸಿ ತರಬೇತಿಯನ್ನು ಪಡೆದಿದ್ದಾರೆ. ಮಂಗಳೂರು ನಗರ ಉತ್ತರ ಬಿಜೆಪಿ ಮಂಡಲದ ಅಧ್ಯಕ್ಷರಾಗಿರುವ ಪ್ರೊ.ಡಾ.ವೈ. ಭರತ್ ಶೆಟ್ಟಿ, ಮಂಗಳೂರು ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ ಅನುಭವ ಹೊಂದಿದ್ದಾರೆ. ಈ ಹಿಂದೆ ಬಿಜೆಪಿಯುವ ಮೋರ್ಚಾದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
2014ರಲ್ಲಿ ‘ನರೇಂದ್ರ ಮೋದಿಯವರ ಭಾರತ ಗೆಲ್ಲಿಸಿ’ ಮಂಗಳೂರು ರ್ಯಾಲಿಯ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಲೋಹ ಸಂಗ್ರಹಣಾ ಸಮಿತಿಯ ಜಿಲ್ಲಾ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರೊ.ಡಾ.ವೈ. ಭರತ್ ಶೆಟ್ಟಿ ಎ.ಜೆ. ದಂತ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಂಶುಪಾಲ ಹಾಗೂ ಪ್ರೊಫೆಸರ್ ಆಗಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (ಐಸಿಎಂಆರ್) ಆಡಳಿತ ಸಮಿತಿ ಸದಸ್ಯ, ಕಳೆದ 8 ವರ್ಷಗಳಿಂದ ಭಾರತೀಯ ದಂತ ವೈದ್ಯರ ಸಂಘಟನೆಯ ಕೇಂದ್ರ ಸಮಿತಿ ಸದಸ್ಯರಾಗಿ, ಐಡಿಎ ರಾಜ್ಯ ಆಡಳಿತ ಸಮಿತಿ ಸದಸ್ಯ, ಯೆನೆಪೋಯ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೆ, ಭಾರತದ ದಂತ ವೈದ್ಯರ ಸಮಿತಿಯ ಉಪಾಧ್ಯಕ್ಷ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮಂಗಳೂರು ಸಿಟಿಜನ್ ಕೌನ್ಸಿಲ್‌ನ ಸ್ಥಾಪಕ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಭರತ್ ಶೆಟ್ಟಿ ಹಲವು ವೈದ್ಯಕೀಯ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ವರದಿಗಳನ್ನು ಮಂಡಿಸಿದ್ದಾರೆ.