×
Ad

ಜಲೀಲ್ ಕರೋಪಾಡಿ ಹತ್ಯೆಯಾಗಿ ವರ್ಷ ಕಳೆದರೂ, ನೈಜ ಆರೋಪಿಗಳನ್ನು ಬಂಧಿಸಿಲ್ಲ: ರಿಯಾಝ್ ಫರಂಗಿಪೇಟೆ

Update: 2018-04-20 22:34 IST

ಬಂಟ್ವಾಳ, ಎ. 20: "ಜಲೀಲ್ ಕರೋಪಾಡಿ ಹತ್ಯೆಯಾಗಿ ಇಂದಿಗೆ ವರ್ಷ ಕಳೆದರೂ, ನೈಜ ಆರೋಪಿಗಳನ್ನು ಬಂಧಿಸಿ, ಶಿಕ್ಷಿಸುವಲ್ಲಿ ಇಲ್ಲಿನ ಸಚಿವರು ವಿಫಲರಾಗಿದ್ದಾರೆ" ಎಂದು ಎಸ್‌ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಆರೋಪಿಸಿದ್ದಾರೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿ, ನಂತರ ಬಿ.ಸಿ.ರೋಡಿನ ಲಯನ್ಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿ, "ತನ್ನ ಪಕ್ಷದ ನಾಯಕ ಹಾಗೂ ಗ್ರಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಹತ್ಯಾ ಆರೋಪಿಗಳನ್ನು ಬಂಧಿಸಿ, ಶಿಕ್ಷಿಸಲು ಸಾಧ್ಯವಾಗದಿದ್ದರೆ, ಜನಸಾಮಾನ್ಯರು ನ್ಯಾಯ ನಿರೀಕ್ಷಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಕ್ಷೇತ್ರದ ಜನರು ಅಭದ್ರತೆ ಹಾಗೂ ಭಯದ ವಾತಾರಣದಲ್ಲಿ ಜೀವಿಸುತ್ತಿದ್ದಾರೆ ಎಂದರು.

ಬಿಜೆಪಿಯ ಉಗ್ರ ಹಿಂದುತ್ವ ಮತ್ತು ಕಾಂಗ್ರೆಸ್‌ನ ಮೃದು ಹಿಂದುತ್ವದ ವಿರುದ್ಧ ನನ್ನ ಸ್ಪರ್ಧೆ. ಸುಭದ್ರ ಹಾಗೂ ಸಬಲೀಕೃತ ಬಂಟ್ವಾಳವೇ ನನ್ನ ಮುಂದಿನ ಮುಖ್ಯ ಗುರಿ. ಆದುದರಿಂದ ಈ ಬಾರಿಯ ಚುನಾವಣೆಯಲ್ಲಿ ಕಾರ್ಯಕರ್ತರೆಲ್ಲರೂ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು.

ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಮಾತನಾಡಿ, ಶತಮಾನಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ಒಪ್ಪಂದದ ರಾಜಕೀಯದಿಂದ ಬೇಸತ್ತು ಜನತೆಯು ಎಸ್‌ಡಿಪಿಐ ಪಕ್ಷಕ್ಕೆ ಬೆಂಬಲವಾಗಿ ನಿಂತಿಕೊಂಡಿರುವುದು ನಮ್ಮ ರಾಜಕೀಯ ಶಕ್ತಿಯನ್ನು ಇನ್ನೂ ಹೆಚ್ಚಿಸಿದೆ. ಈ ಬೆಳಣಿಗೆಯು ಕರ್ನಾಟಕದ ರಾಜಕೀಯದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಲಿದೆ ಎಂದರು.

ಸಭೆಯಲ್ಲಿ ಎಸ್‌ಡಿಪಿಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಶಾಹುಲ್ ಎಸ್.ಎಚ್. ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ, ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ರಾಜ್ಯ ಸಮಿತಿ ಸದಸ್ಯ ನ್ಯಾ. ಅಬ್ದುಲ್ ಮಜೀದ್ ಖಾನ್, ಉತ್ತರ ವಿಧಾನಸಬಾ ಕ್ಷೇತ್ರ ಅಭ್ಯರ್ಥಿ ಜಲೀಲ್ ಕೃಷ್ಣಾಪುರ, ಜಿಲ್ಲಾ ನಾಯಕರಾದ ಇಕ್ಬಾಲ್ ಬೆಳ್ಳಾರೆ, ಆನಂದ್ ಮಿತ್ತಬೈಲ್, ಆಂಟೋನಿ ಪ್ರದೀಪ್, ಪಿಎಫ್‌ಐ ಬಂಟ್ವಾಳ ಘಟಕ ಅಧ್ಯಕ್ಷ ಇಜಾಝ್ ಅಹ್ಮದ್, ಯೂಸುಫ್ ಆಲಡ್ಕ, ಸಜಿಪನಡು ಗ್ರಾಪಂ ಅಧ್ಯಕ್ಷ ನಾಸಿರ್, ವುಮೆನ್ಸ್ ಇಂಡಿಯಾ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ, ಪುರಸಭಾ ಸದಸ್ಯರಾದ ಇಕ್ಬಾಲ್ ಐ.ಎಂ.ಆರ್, ಮುಮ್ತಾರ್ ತಲಪಾಡಿ, ಜಾಫರ್ ಸಾದಿಕ್ ಫೈಝಿ, ನವಾರ್ ಕಟ್ಟೆ ಮುಂತಾದವರು ಉಪಸ್ಥಿತರಿದ್ದರು. ಮೂನಿಸ್ ಅಲಿ ಸ್ವಾಗತಿಸಿ, ಅಕ್ಬರ್ ಅಲಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News