×
Ad

​ಉಡುಪಿಯಲ್ಲಿ ಭಟ್, ಕಾಪುವಿನಲ್ಲಿ ಲಾಲಾಜಿ: ಬಿಜೆಪಿ ಟಿಕೆಟ್ ಗೊಂದಲಕ್ಕೆ ತೆರೆ

Update: 2018-04-20 22:38 IST

ಉಡುಪಿ, ಎ.20: ವಿಧಾನಸಭಾ ಚುನಾವಣೆಗೆ ಅಂತಿಮವಾಗಿ ಉಡುಪಿ ಕ್ಷೇತ್ರದಿಂದ ಮಾಜಿ ಶಾಸಕ ಕೆ.ರಘುಪತಿ ಭಟ್ ಹಾಗೂ ಕಾಪು ಕ್ಷೇತ್ರದಿಂದ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ಕಳೆದ ಹಲವು ಸಮಯಗಳಿಂದ ಎದ್ದಿದ್ದ ಸಾಕಷ್ಟು ಗೊಂದಲಕ್ಕೆ ತೆರೆ ಎಳೆದಂತಾಗಿದೆ.

ಬಿಜೆಪಿಯು ತನ್ನ ಮೊದಲ ಪಟ್ಟಿಯಲ್ಲಿ ಕಾರ್ಕಳ ಕ್ಷೇತ್ರಕ್ಕೆ ಶಾಸಕ ಸುನೀಲ್ ಕುಮಾರ್ ಹಾಗೂ ಕುಂದಾಪುರ ಕ್ಷೇತ್ರಕ್ಕೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಎರಡನೆ ಪಟ್ಟಿಯಲ್ಲಿ ಬೈಂದೂರು ಕ್ಷೇತ್ರಕ್ಕೆ ಸುಕುಮಾರ್ ಶೆಟ್ಟಿ ಅವರ ಹೆಸರನ್ನು ಬಿಡುಗಡೆಗೊಳಿಸಿತ್ತು. ಆದರೆ ಸಾಕಷ್ಟು ಗೊಂದಲದ ಹಿನ್ನೆಲೆಯಲ್ಲಿ ಉಡುಪಿ ಹಾಗೂ ಕಾಪು ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಘೋಷಿಸದೆ ಬಾಕಿ ಇರಿಸ ಲಾಗಿತ್ತು. ಇದೀಗ ಮೂರನೆ ಪಟ್ಟಿಯಲ್ಲಿ ಈ ಎರಡೂ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಪಕ್ಷ ಬಿಡುಗಡೆ ಮಾಡಿದೆ.

ಆದರೆ ಕಾಪು ಕ್ಷೇತ್ರದಲ್ಲಿ ಪ್ರಮುಖ ಆಕಾಂಕ್ಷಿಯಾಗಿದ್ದ ಉದ್ಯಮಿ, ಬಿಜೆಪಿ ಮುಖಂಡ ಗುರ್ಮೆ ಸುರೇಶ್ ಶೆಟ್ಟಿ ಟಿಕೆಟ್ ವಂಚಿತರಾಗಿದ್ದಾರೆ. ಅದೇ ರೀತಿ ಯಶ್ಪಾಲ್ ಸುವರ್ಣ ಕೂಡ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದರು. ಉಡುಪಿ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ನಯನಾ ಗಣೇಶ್ ಹಾಗೂ ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ ಅವರ ಹೆಸರು ಕೂಡ ಕೇಳಿಬಂದಿತ್ತು.

2004 ಮತ್ತು 2008ರಲ್ಲಿ ಶಾಸಕರಾಗಿದ್ದ ರಘುಪತಿ ಭಟ್, ಸೆಕ್ಸ್ ಸಿಡಿ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ 2013ರ ಚುನಾವಣೆಯಲ್ಲಿ ಸ್ಪರ್ಧಿಸಿರ ಲಿಲ್ಲ. ಅದೇ ರೀತಿ ಲಾಲಾಜಿ ಆರ್.ಮೆಂಡನ್ ಕಾಪು ಕ್ಷೇತ್ರದಲ್ಲಿ 2004 ಮತ್ತು 2008ರಲ್ಲಿ ಶಾಸಕರಾಗಿದ್ದು, ಕಳೆದ 2013ರ ಚುನಾವಣೆಯಲ್ಲಿ ವಿನಯ ಕುಮಾರ್ ಸೊರಕೆ ವಿರುದ್ಧ ಸೋಲು ಕಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News