ಕಡಬ: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಪ್ರತಿಭಟನೆ
ಕಡಬ, ಎ.20. ಇತ್ತೀಚೆಗೆ ಕಥುವಾದಲ್ಲಿ ನಡೆದ ಎಂಟರ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಎಸ್ಕೆಎಸ್ಸೆಸ್ಸೆಫ್ ಕಡಬ ವಲಯದ ವತಿಯಿಂದ ಕಡಬ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಕೇರಳದ ಜಾಮಿಯಾ ನೂರಿಯಾ ಅರೇಬಿಯಾ ವಿದ್ಯಾರ್ಥಿ ನಹೀಮ್ ಮುಕ್ವೆ ಮಾತನಾಡಿ, ದೇಶದಲ್ಲಿ ಅಮಾಯಕ ಹೆಣ್ಣುಮಕ್ಕಳು ದಿನ ನಿತ್ಯ ಲೈಂಗಿಕ ಶೋಷಣೆಗೊಳಗಾಗುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಬೇಕಿದೆ. ಹೆಣ್ಣುಮಕ್ಕಳನ್ನು ರಕ್ಷಿಸಬೇಕಾದ ಸರಕಾರವೇ ಆರೋಪಿಗಳಿಗೆ ರಕ್ಷಣೆಯನ್ನು ನೀಡುತ್ತಿದೆ. ಈ ದೇಶದ ಸಬಲೀಕರಣಕ್ಕಾಗಿ ಮಹಿಳೆಯರಿಗೆ ಮೀಸಲಾತಿ ನೀಡುತ್ತಿರುವ ಈ ಸಂದರ್ಭದಲ್ಲಿ ಯಾರಿಗಾಗಿ ಮೀಸಲಾತಿ ನೀಡುತ್ತಿದ್ದೀರಿ...? ಬದುಕಲು ನಿರಾಕರಿಸಲ್ಪಟ್ಟ ಮಹಿಳೆಯರಿಗೆ ಯಾಕಾಗಿ ಮೀಸಲಾತಿ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದ ಅವರು ಹೆಣ್ಮಕ್ಕಳಿಗಾಗಿ ಸುಂದರವಾದ ಘೋಷ ವಾಕ್ಯಗಳನ್ನು ಹೇಳುವ ಬದಲು ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದರು.
ರಹ್ಮಾನಿಯಾ ಟೌನ್ ಜುಮಾ ಮಸೀದಿಯ ಅಧ್ಯಕ್ಷರಾದ ಎಸ್. ಅಬ್ದುಲ್ ಖಾದರ್, ಖತೀಬರಾದ ಇಬ್ರಾಹಿಂ ದಾರಿಮಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಕೆಎಸ್ಸೆಸ್ಸೆಫ್ ಕಡಬ ವಲಯದ ಎಲ್ಲಾ ಕ್ಲಸ್ಟರ್ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಆರೋಪಿಗಳಿಗೆ ಕಠಿಣೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಕಡಬ ತಾಲೂಕು ಕಛೇರಿಯ ಪ್ರಭಾರ ಉಪ ತಹಶೀಲ್ದಾರ್ ಶ್ರೀಮತಿ ಭಾರತಿಯವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಕಡಬ ಪೊಲೀಸರು ಸೂಕ್ತ ಬಂದೋಬಸ್ತ್ ವಹಿಸಿದ್ದರು.