ಕಡಲ ಚಿಪ್ಪ ಮಾರಾಟ ಮಾಡಲು ಯತ್ನ: ಏಳು ಮಂದಿ ಸೆರೆ
ಮಂಗಳೂರು, ಎ. 20: ಕಡಲ ಚಿಪ್ಪನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಏಳು ಮಂದಿ ಆರೋಪಿಗಳನ್ನು ನಗರ ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಅಡ್ಡೂರು ಗ್ರಾಮದ ಕೋಡಿಬೆಟ್ಟು ಮುಹಮ್ಮದ್ ಮುನ್ಸೂರು (27), ಬಡಗುಳಿಪಾಡಿ ಗ್ರಾಮದ ನಾಡಾಜೆ ರಸ್ತೆ ನಿವಾಸಿ ಇಬ್ರಾಹೀಂ (35), ನೆಲ್ಯಾಡಿ ದೊಂತಿಲ ನಿವಾಸಿ ಜಾರ್ಜ್ ವಿ.ಕೆ. (35), ಕಳವಾರು ಗ್ರಾಮದ ಕುಪ್ಪೆಪದವು ಅಟ್ಟಿಪದವು ನಿವಾಸಿ ದಿನೇಶ್ (29), ಪಾವೂರು ಗ್ರಾಮದ ಹರೇಕಳ ಮುಹಮ್ಮದ್ ಮುಖ್ತಾರ್ (19), ಕಳವಾರು ಗ್ರಾಮದ ಕುಪ್ಪೆಪದವು ಬೊಳಿಯ ಮನೆ ಮುಹಮ್ಮದ್ ನೌಶಾದ್ (29), ಪುತ್ತೂರು ನೆಲ್ಯಾಡಿ ನಿವಾಸಿ ಇಸ್ಮಾಈಲ್ (40) ಬಂಧಿತ ಆರೋಪಿಗಳು.
ಬಂಧಿತರ ಪೈಕಿ ಇಬ್ರಾಹೀಂ ವಿರುದ್ಧ ಬಜಪೆ ಠಾಣೆಯಲ್ಲಿ ಕೊಲೆ ಯತ್ನ, ವಾಹನ ಕಳವು ಪ್ರಕರಣ ದಾಖಲಾಗಿದೆ. ನಗರದ ಕುಂಟಿಕಾನದಲ್ಲಿರುವ ಆಸ್ಪತ್ರೆಯ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಎರಡು ಕಾರು ಹಾಗೂ ಬೈಕ್‌ನಲ್ಲಿ 7 ಮಂದಿ ಆರೋಪಿಗಳನ್ನು ಪೊಲೀಸರು ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದಿದ್ದಾರೆ.
ನಕಲಿ ಮುತ್ತು ಇರುವ ಕಡಲು ಚಿಪ್ಪನ್ನು ತೋರಿಸಿ ‘‘ತುಂಬಾ ಅದೃಷ್ಟವಾಗಿರುವ ಇದು ಬೆಲೆ ಬಾಳುವಂತದ್ದು. ಮನೆಯಲ್ಲಿ ಇಟ್ಟುಕೊಂಡರೆ ತುಂಬಾ ಸಂಪತ್ತು ಆಗುತ್ತದೆ’’ ಎಂದೆಲ್ಲಾ ಹೇಳಿ ಜನರಿಗೆ ನಂಬಿಸಿ ಮೋಸ ಮಾಡಲು ಮುಂದಾಗಿದ್ದರು. ಹಣ ಮಾಡುವ ಉದ್ದೇಶದಿಂದ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿರುವುದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ. ಆರೋಪಿಗಳ ವಶದಿಂದ ನಕಲಿ ಮುತ್ತುಗಳಿರುವ ಕಡಲ ಚಿಪ್ಪು, ಎರಡು ಮಾರುತಿ 800 ಕಾರು, 1 ಬಜಾಜ್ ಡಿಸ್ಕವರಿ ಬೈಕ್ ಮತ್ತು ಎಂಟು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಸಿಬಿ ಇನ್‌ಸ್ಪೆಕ್ಟರ್ ಶ್ರೀನಿವಾಸ ಕೆ., ಪಿಎಸ್‌ಐಗಳಾದ ಶ್ಯಾಮ್ ಸುಂದರ್, ಕಬ್ಬಳ್‌ರಾಜ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.