ಬಿಜೆಪಿಗೆ ಜೈಲಿಗೆ ಹೋಗಲು ಮಾತ್ರ ಹಿಂದುಳಿದ ವರ್ಗದ ಕಾರ್ಯಕರ್ತರು ಬೇಕು : ಕೃಷ್ಣ ಪಾಲೆಮಾರ್ ಆಕ್ರೋಶ
ಮಂಗಳೂರು, ಎ. 21: ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಶೆಟ್ಟಿ ಘೋಷಣೆ ಮಾಡಿರುವುದು ಪಕ್ಷದಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿದೆ. ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅಸಮಾಧಾನ ವ್ಯಕ್ತಪಡಿಸಿದ್ದು, ಬಿಜೆಪಿಗೆ ಜೈಲಿಗೆ ಹೋಗಲು ಮಾತ್ರ ಹಿಂದುಳಿದ ವರ್ಗದ ಕಾರ್ಯಕರ್ತರು ಬೇಕು, ಇಂತಹ ನಡೆ ಪಕ್ಷದ ಹಿತಕ್ಕೆ ಮಾರಕ ಇದರ ಹಿಂದೆ ಸಂಸದ ನಳಿನ್ ಕುಮಾರ್ ಕೈವಾಡವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ನನಗೆ ಟಿಕೆಟ್ ಫೈನಲ್ ಆಗಿರುವುದನ್ನು ಖಾತರಿಪಡಿಸಿದ್ದರು. ಆದರೆ, ಕೊನೆಕ್ಷಣದಲ್ಲಿ ಟಿಕೆಟ್ ಕೈತಪ್ಪಿದ್ದು ಬೇಸರವಾಗಿದೆ. ಇದರಲ್ಲಿ ಸಂಸದ ನಳಿನ್ ಕುಮಾರ್ ಕೈಯಾಡಿಸಿದ್ದಾರೆ. ಈ ಮೂಲಕ ನನಗೆ ಮತ್ತು ಕರಾವಳಿಯ ಪಕ್ಷದ ಕಾರ್ಯಕರ್ತರಿಗೆ ಅವಮಾನ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಳಿನ್ ಗೆಲುವಿಗಾಗಿ ಬಹಳಷ್ಟು ಹಣ ಖರ್ಚು ಮಾಡಿದ್ದೆ. ಆದರೆ ಈಗ ನನಗೇ ದ್ರೋಹ ಮಾಡಿದ್ದಾರೆ'' ಎಂದು ಪಾಲೆಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಬಂಟ್ಸ್ ಸಮುದಾಯಕ್ಕೆ ಜಿಲ್ಲೆಯಲ್ಲಿ ನಾಲ್ಕು ಸ್ಥಾನ ನೀಡುವ ಮೂಲಕ ಹಿಂದುಳಿದ ವರ್ಗದ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಜೈಲಿಗೆ ಹೋಗಲಷ್ಟೆ ಹಿಂದುಳಿದವರು ಬೇಕಾಗುವುದೇ ? ಇಂತಹ ನಡೆ ಪಕ್ಷದ ಹಿತಕ್ಕೆ ಮಾರಕ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿಂದು ಸಂಘಟನೆ ಮುಖಂಡ ಸತ್ಯಜಿತ್ ಸುರತ್ಕಲ್ ಕೂಡ ಅಸಮಾಧಾನಗೊಂಡಿದ್ದು, ಬೆಂಬಲಿಗರು ಪ್ರತ್ಯೇಕವಾಗಿ ಸಭೆ ಸೇರಿದ್ದಾರೆ. ಪಕ್ಷೇತರ ಸ್ಪರ್ಧೆ ನಡೆಸುವಂತೆ ಒತ್ತಡ ಹಾಕಿದ್ದಾರೆ. ಈ ಮೂಲಕ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಒಡೆದ ಮನೆಯಾಗಿದೆ ಎಂದು ಮಾಜಿ ಸಚಿವ ಕೃಷ್ಣ ಪಾಲೆಮಾರ್ ಹೇಳಿದರು.