ಎ. 24: ‘ಬೆಳಕಿನೊಂದಿಗೆ ನಮ್ಮ ನಡಿಗೆ’ ಉಡುಪಿಯಲ್ಲಿ ಸಾರ್ವಜನಿಕ ಪ್ರತಿಭಟನೆ

Update: 2018-04-21 13:23 GMT

ಉಡುಪಿ, ಎ. 21: ಕಥುವಾ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಮತ್ತು ಉನಾವೋ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ನಿರಂತರ ಅತ್ಯಾಚಾರವನ್ನು ಖಂಡಿಸಿ ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ‘ಬೆಳಕಿನೊಂದಿಗೆ ನಮ್ಮ ನಡಿಗೆ’ ಸಾರ್ವಜನಿಕ ಪ್ರತಿಭಟನೆಯನ್ನು ಎ.24ರಂದು ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಆಶ್ರಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಅಂತಾರಾಷ್ಟ್ರೀಯ ಕ್ರೈಸ್ತ ಸಂಘಟನೆಗಳ ಒಕ್ಕೂಟ, ಕ್ಯಾಥೋಲಿಕ್ ಸಭಾ, ಸಿಐಟಿಯು, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ಸಹಯೋಗದೊಂದಿಗೆ ಈ ಪ್ರತಿಭಟನೆ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕ ಅಬ್ದುಲ್ ಅಝೀಝ್ ಉದ್ಯಾವರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಅಂದು ಸಂಜೆ 6.30ಕ್ಕೆ ಅಜ್ಜರಕಾಡು ಭುಜಂಗ ಪಾರ್ಕ್‌ನಿಂದ ಪ್ರತಿಭಟನಾ ಜಾಥವು ಹೊರಡಲಿದ್ದು, ಸಂಜೆ 7.30ಕ್ಕೆ ನಗರದ ಚಿತ್ತರಂಜನ್ ಸರ್ಕಲ್‌ನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಇದರಲ್ಲಿ ಚಲನಚಿತ್ರ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾರ್ ರೈ, ದಸಂಸ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮುಖ್ಯ ಅತಿಥಿಗಳಾಗಿರುವರು.

ಅದೇ ರೀತಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್, ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ, ಸಾಹಿತಿ ವೈದೇಹಿ, ಕೊರಗ ಅಭಿವೃದ್ಧಿ ಸಮಿತಿಯ ಜಿಲ್ಲಾ ಅಧ್ಯಕ್ಷೆ ಸುಶೀಲಾ ನಾಡ, ಅನುಪಮ ಮಹಿಳಾ ಮಾಸಿಕದ ಉಪಸಂಪಾದಕಿ ಸಬೀಹಾ ಫಾತಿಮಾ, ಕ್ರೈಸ್ತ ಧರ್ಮಗುರು ಫಾ. ವಿಲಿಯಂ ಮಾರ್ಟಿಸ್, ಸಿಐಟಿಯು ಜಿಲ್ಲಾಧ್ಯಕ್ಷ ವಿಶ್ವನಾಥ ರೈ, ದಸಂಸ ಮುಖಂಡರಾದ ಸುಂದರ್ ಮಾಸ್ತರ್ ಹಾಗೂ ಶ್ಯಾಮ ರಾಜ ಬಿರ್ತಿ ಭಾಗವಹಿಸಲಿರವರು.

ಸುದ್ದಿಗೋಷ್ಠಿಯಲ್ಲಿ ಜಿ.ರಾಜಶೇಖರ್, ಸುಂದರ್ ಮಾಸ್ಟರ್, ಫಾ.ವಿಲಿಯಂ ಮಾರ್ಟಿಸ್, ಯಾಸೀನ್ ಮಲ್ಪೆ, ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಸಲಾವುದ್ದೀನ್, ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News