ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣ: ತಿರುಗಿ ಬಿದ್ದ ಇನ್ನೆರಡು ಸಾಕ್ಷಿಗಳು

Update: 2018-04-21 12:20 GMT

ಮುಂಬೈ, ಎ.21: ಸೊಹ್ರಾಬುದ್ದೀನ್ ಶೇಖ್  ಮತ್ತು ತುಲಸೀರಾಮ್ ಪ್ರಜಾಪತಿ 'ನಕಲಿ' ಎನ್‍ಕೌಂಟರ್ ಪ್ರಕರಣಗಳಲ್ಲಿನ ಇನ್ನಿಬ್ಬರು ಪ್ರಾಸಿಕ್ಯೂಶನ್ ಪರ ಸಾಕ್ಷಿಗಳು ತಿರುಗಿ ಬಿದ್ದಿದ್ದಾರೆ. ಇದರೊಂದಿಗೆ ಸಿಬಿಐ ತನಿಖೆ ನಡೆಸುತ್ತಿರುವ ಈ ಪ್ರ್ರಕರಣದಲ್ಲಿ ತಿರುಗಿ ಬಿದ್ದಿರುವ ಒಟ್ಟು ಸಾಕ್ಷಿಗಳ ಸಂಖ್ಯೆ 52ಕ್ಕೆ ಏರಿದೆ. ಇಲ್ಲಿಯ ತನಕ ಒಟ್ಟು 76 ಸಾಕ್ಷಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಿದೆ.

ಸಿಬಿಐ ವಿಶೇಷ ನ್ಯಾಯಾಧೀಶ ಎಸ್ ಜೆ ಶರ್ಮಾ ಎದುರು ಹಾಜರಾದ ಸಾಕ್ಷಿಗಳಾದ ರಫೀಕ್ ಹಫೀಝ್ ಹಾಗೂ ಫಿರೋಝ್ ಖಾನ್ ಏಜನ್ಸಿ ಹೇಳಿರುವಂತೆ ತಾವೇನು  ಹೇಳಿಕೆ ನೀಡಿಲ್ಲ ಎಂದು  ಹೇಳಿದ್ದಾರೆ. ತಾವು ಸಿಬಿಐ ಕಚೇರಿಗೆ ಕೇವಲ ಒಮ್ಮೆ ಭೇಟಿ ನೀಡಿದ್ದಾಗಿ ಹಾಗೂ ಈ ಸಂದರ್ಭ ತಮ್ಮ ಹೆಸರು ಹಾಗೂ ವಿಳಾಸಗಳನ್ನು ಸಿಬಿಐ ಬರೆದಿಟ್ಟುಕೊಂಡಿದ್ದಾಗಿ ಅವರು ತಿಳಿಸಿದ್ದಾರೆ. ನಂತರ ವಿಶೇಷ ಸಾರ್ವಜನಿಕ ಅಭಿಯೋಜಕ ಅವರು ತಿರುಗಿ ಬಿದ್ದಿದ್ದಾರೆ ಎಂದು ಘೋಷಿಸಿದರು.

ಸಿಬಿಐ ಪ್ರಕಾರ  ಹಫೀಝ್ ಮತ್ತು ಖಾನ್ ತನ್ನ ಮುಂದೆ ನೀಡಿದ ಹೇಳಿಕೆಯ ಪ್ರಕಾರ ಅವರನ್ನು ಕೊಲೆ ಪ್ರಕರಣವೊಂದರಲ್ಲಿ ಬಂಧಿಸಲಾಗಿತ್ತು.  (ನಂತರ ಅವರು ಖುಲಾಸೆಗೊಂಡಿದ್ದರು)  ಪ್ರಜಾಪತಿಯನ್ನು ರಾಜಸ್ಥಾನ ಜೈಲಿನಲ್ಲಿ ಭೇಟಿಯಾಗಿ ತಾನು ಮತ್ತು ಶೇಖ್ ಆರ್.ಕೆ. ಮಾರ್ಬಲ್ಸ್ ಮತ್ತು ಸಂಗಮ್ ಟೆಕ್ಸ್ ಟೈಲ್ಸ್ ನಿಂದ 20 ಕೋಟಿ ರೂ. ವಸೂಲಿ ಮಾಡುವುದಾಗಿ ಹೇಳಿದ್ದ. ತಾವು ಸೊಹ್ರಾಬುದ್ದೀನ್ ಶೇಖ್ ನನ್ನು ಕೇವಲ ರಾಜಕೀಯ ಒತ್ತಡದಿಂದಾಗಿ ಬಂಧಿಸಿದ್ದಾಗಿ ಗುಜರಾತ್ ಪೊಲಿಸ್ ಅಧಿಕಾರಿ ಅಭಯ್ ಹಾಗೂ  ಐಪಿಎಸ್ ಅಧಿಕಾರಿ ಇ ಜಿ ವಂಝಾರ ಹೇಳಿದ್ದರೆಂದು ಪ್ರಜಾಪತಿ ತಮಗೆ ತಿಳಿಸಿದ್ದಾಗಿ ಹಫೀಝ್ ಮತ್ತು ಖಾನ್ ಹೇಳಿದ್ದರೆಂದು ಸಿಬಿಐ ಈ ಹಿಂದೆ ವಾದಿಸಿತ್ತು.

ಆರ್ ಕೆ ಮಾರ್ಬಲ್ಸ್ ಹಾಗೂ ಸಂಗಂ ಟೆಕ್ಸ್ ಟೈಲ್ಸ್ ನಿಂದ ತಮಗೆ ದೊರೆತ ಕೋಟ್ಯಂತರ ರೂಪಾಯಿಯಲ್ಲಿ ಪೊಲೀಸರಿಗೆ ಸಣ್ಣ್ಣ ಪಾಲು ದೊರಕಿದ್ದು ಹೆಚ್ಚಿನ ಪಾಲು ಆಗಿನ  ರಾಜಸ್ಥಾನ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ ಅವರಿಗೆ ಹೋಗಿತ್ತು ಎಂದು ಪ್ರಜಾಪತಿ ಅವರಿಬ್ಬರಿಗೆ ತಿಳಿಸಿದ್ದನೆಂದು ಸಿಬಿಐ ಹೇಳಿತ್ತು. ತನ್ನ ಜೈಲಿನಲ್ಲಿನ ವೆಚ್ಚ ಹಾಗೂ ವಕೀಲರ ಶುಲ್ಕವನ್ನು ಇಬ್ಬರು ಪೊಲೀಸ್ ಅಧಿಕಾರಿಗಳೇ ನೀಡುತ್ತಿದ್ದರೆಂದು ಪ್ರಜಾಪತಿ ಅವರಿಬ್ಬರಿಗೆ ತಿಳಿಸಿದ್ದನೆಂದೂ ಸಿಬಿಐ ಹೇಳಿತ್ತಾದರೂ ಶುಕ್ರವಾರ ತಮ್ಮ ಹೇಳಿಕೆಯಲ್ಲಿ ಇಬ್ಬರೂ ತಾವು ಹಾಗೆ ಹೇಳಿಲ್ಲವೆಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News