ರುಂಡವಿಲ್ಲದ ದೇಹ ಪತ್ತೆ: ವಿದೇಶಿ ಮಹಿಳೆಯದ್ದಾಗಿರಬಹುದೆಂಬ ಶಂಕೆ

Update: 2018-04-21 13:18 GMT

ತಿರುವನಂತಪುರಂ, ಎ.21: ಕೇರಳದ ಕೋವಲಂನಲ್ಲಿ ಮಹಿಳೆಯ ರುಂಡವಿಲ್ಲದ ದೇಹ ಪತ್ತೆಯಾಗಿದ್ದು, ಇದು ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಲತ್ವಿಯನ್ ಮೂಲದ ಪ್ರವಾಸಿಯದ್ದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕೇರಳ ಪ್ರವಾಸದಲ್ಲಿದ್ದ ಲತ್ವಿಯ ದೇಶದ ಮಹಿಳೆ 33ರ ಹರೆಯದ ಲಿಗ ಸ್ಕ್ರೊಮೆನ್ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಕೋವಲಂನಲ್ಲಿ ನದಿ ತೀರದ ಪೊದೆಗಳ ಮಧ್ಯೆ ಸಿಕ್ಕಿರುವ ರುಂಡವಿಲ್ಲದ ದೇಹದ ಮೇಲಿರುವ ಬಟ್ಟೆಗಳು ತನ್ನ ಸಹೋದರಿಯದ್ದೇ ಎಂದು ಲಿಗ ಸಹೋದರಿ ಇಲ್ಝ್ ತಿಳಿಸಿದ್ದಾರೆ. ಸದ್ಯ ಅಧಿಕಾರಿಗಳು ಮೃತರ ಗುರುತು ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆ ನಡೆಸಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವು ಸಂಪೂರ್ಣ ಕೊಳೆತು ಹೋಗಿದ್ದು, ಮೂವತ್ತು ದಿನಗಳ ಹಿಂದೆಯೇ ಮಹಿಳೆ ಸಾವನ್ನಪ್ಪಿದ್ದಾರೆ. ಆಕೆಯ ಗುರುತನ್ನು ಮರಣೋತ್ತರ ಪರೀಕ್ಷೆಯ ನಂತರವಷ್ಟೇ ತಿಳಿಯಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ.

ಖಿನ್ನತೆಗಾಗಿ ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಫೆಬ್ರವರಿ 21ರಂದು ಲಿಗ ತನ್ನ ಸಹೋದರಿ ಇಲ್ಝ್ ಜೊತೆ ಭಾರತಕ್ಕೆ ಆಗಮಿಸಿದ್ದರು. ಆದರೆ ಮಾರ್ಚ್ 14ರಂದು ಆಕೆ ನಾಪತ್ತೆಯಾಗಿದ್ದರು. ಆಕೆ ಕೊನೆಯದಾಗಿ ಕೋವಲಂ ಬೀಚ್‌ಗೆ ಆಟೋದಲ್ಲಿ ತೆರಳಿದ್ದರು ಎಂದು ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿತ್ತು. ಆ ಸಮಯದಲ್ಲಿ ಆಕೆ ತನ್ನ ಪಾಸ್‌ಪೋರ್ಟ್ ಮತ್ತು ಮೊಬೈಲ್ ಫೋನನ್ನು ಜೊತೆಗೆ ಕೊಂಡೊಯ್ದಿರಲಿಲ್ಲ.

ಲಿಗ ಪತ್ನಿ ಆ್ಯಂಡ್ರೂ ಮತ್ತು ಸಹೋದರಿ ಇಲ್ಝ್, ಲಿಗಳಿಗಾಗಿ ಎಲ್ಲೆಡೆ ಹುಡುಕಾಡಿದ್ದರು ಮತ್ತು ಆಕೆಯ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News