ಉತ್ತರ ಪ್ರದೇಶ: ಎಫ್‌ಐಆರ್ ದಾಖಲಿಸಲು ಉಚಿತ ಪಿಝ್ಝಾ, ಚಿಲ್ಲಿ ಚಿಕನ್ ಕೇಳಿದ ಪೊಲೀಸರು

Update: 2018-04-21 13:31 GMT

ಲಕ್ನೊ, ಎ.21: ಎಫ್‌ಐಆರ್ ದಾಖಲಿಸಲು ಠಾಣೆಗೆ ಆಗಮಿಸಿದ್ದ ರೆಸ್ಟೋರೆಂಟ್ ಮಾಲಕನಲ್ಲಿ ಉಚಿತ ಪಿಝ್ಝಾ ಮತ್ತು ಚಿಲ್ಲಿ ಚಿಕನ್ ತರಲು ಸೂಚಿಸಿದ ಕಾರಣಕ್ಕೆ ಪೊಲೀಸ್ ಉಪನಿರೀಕ್ಷಕಿಯನ್ನು ಅಮಾನತುಗೊಳಿಸಲಾಗಿದೆ. ಲಕ್ನೊದ ಹಸನ್ಗಂಜ್ ಪೊಲೀಸ್ ಠಾಣೆಯಲ್ಲಿ ಉಪನಿರೀಕ್ಷಕಿಯಾಗಿರುವ ಸುಮಿತ್ರಾ ದೇವಿಯ ವಿರುದ್ಧ ರೆಸ್ಟೋರೆಂಟ್ ಮಾಲಕ ಎಸ್‌ಎಸ್‌ಪಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆಕೆಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಿತ್ ಬೆರಿ ಎಂಬಾತ 7,000 ರೂ. ವಂಚಿಸಿದ್ದಾನೆ ಎಂದು ಆರೋಪಿಸಿ ರೆಸ್ಟೋರೆಂಟ್ ಮಾಲಕ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಉಪನಿರೀಕ್ಷಕಿ ಆತನ ಮುಂದೆ ಈ ವಿಚಿತ್ರ ಬೇಡಿಕೆಯಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ರೆಸ್ಟೋರೆಂಟ್ ಮಾಲಕ ರೋಹಿತ್ ಬೆರಿ ನೀಡಿದ ದೂರನ್ನು ದಾಖಲಿಸಿದ ಉಪನಿರೀಕ್ಷಕಿ ಅದರ ಪ್ರತಿಯನ್ನು ನೀಡಬೇಕಾದರೆ ಉಚಿತ ಪಿಝ್ಝಾ ಮತ್ತು ಚಿಲ್ಲಿ ಚಿಕನ್ ನೀಡುವಂತೆ ಸೂಚಿಸಿದ್ದರು. ಅದರಂತೆ ರೋಹಿತ್ ಆಕೆ ಕೇಳಿದ್ದನ್ನು ಆಕೆಗೆ ತಂದು ನೀಡಿದ್ದರು. ಈ ಪ್ರಕರಣದ ಬಗ್ಗೆ ರೋಹಿತ್ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ ನಂತರ ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಂತರ ಉಪನಿರೀಕ್ಷಕಿ ರೆಸ್ಟೋರೆಂಟ್ ಮಾಲಕರಿಗೆ ಪಿಝ್ಝಾ ಮತ್ತು ಚಿಲ್ಲಿ ಚಿಕನ್ ಹಣವನ್ನು ಪಾವತಿಸಿದ್ದರು. ಆದರೆ ತನಿಖೆಯ ವೇಳೆ, ಸುಮಿತ್ರಾ ದೇವಿ ಎಫ್‌ಐಆರ್ ದಾಖಲಿಸಲು ಉಚಿತ ಪೀಝಾ ಮತ್ತು ಚಿಲ್ಲಿ ಚಿಕನ್‌ಗೆ ಬೇಡಿಕೆಯಿಟ್ಟಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆಕೆಯನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News