×
Ad

ಉಡುಪಿ ಕ್ಷೇತ್ರದಿಂದ ಪಕ್ಷೇತರರಾಗಿ ಶಿರೂರು ಶ್ರೀ ನಾಮಪತ್ರ ಸಲ್ಲಿಕೆ

Update: 2018-04-21 19:08 IST

ಉಡುಪಿ, ಎ.21: ಉಡುಪಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಅಷ್ಠಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಇಂದು ನಾಮಪತ್ರ ಸಲ್ಲಿಸಿದರು.

ಮಧ್ಯಾಹ್ನ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸ್ವಾಮೀಜಿ, ನಂತರ ಬನ್ನಂಜೆಯ ಹಳೆ ಜಿಪಂ ಕಟ್ಟಡದಲ್ಲಿರುವ ಚುನಾವಣಾ ಕಚೇರಿಗೆ ತೆರಳಿ ಮೂರು ಸೆಟ್‌ಗಳಲ್ಲಿ ನಾಮಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಶಶಿಧರ್ ಭಟ್, ವಿಜಯ ರಾಘವ ರಾವ್ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದೆ. ಆದರೆ ಅಲ್ಲಿ ಅವಕಾಶ ಸಿಗದಿದ್ದ ಕಾರಣಕ್ಕೆ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ನಾಮಪತ್ರ ವಾಪಾಸ್ಸು ತೆಗೆದುಕೊಳ್ಳುವುದಿಲ್ಲ. ಇನ್ನು ನಾನು ಯಾರ ಮಾತು ಕೂಡ ಕೇಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಬಂದು ಹೇಳಿದರೆ ಆ ಸಂದರ್ಭ ಆಲೋಚನೆ ಮಾಡುತ್ತೇನೆ ಎಂದು ಹೇಳಿದರು.

ಪಕ್ಷೇತರನಾಗಿ ಸ್ಪರ್ಧಿಸುವ ಬಗ್ಗೆ ಈ ಹಿಂದೆಯೇ ಸಂಕಲ್ಪ ಮಾಡಿದ್ದೇನೆ. ಅದಕ್ಕೆ ಬದ್ಧನಾಗಿದ್ದೇನೆ. ಯಾವುದೇ ಕಾರಣಕ್ಕೂ ನಾಮಪತ್ರ ವಾಪಾಸ್ಸು ತೆಗೆದುಕೊಳ್ಳುವುದಿಲ್ಲ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮೇಲೆ ನನಗೆ ನಂಬಿಕೆ ಇದೆ. ಅವರಿಗಾಗಿ ನಾನು ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂದು ಸಂಕಲ್ಪ ಮಾಡಿದ್ದೆ. ನಾನು ಪಕ್ಷೇತರನಾಗಿಯೂ ಮೋದಿಗೆ ಬೆಂಬಲ ನೀಡುತ್ತೇನೆ ಎಂದರು.

ಇನ್ನೂ ಕೂಡ ಅವಕಾಶ ಇದೆ. ನನಗೆ ಟಿಕೆಟ್ ಕೊಟ್ಟರೆ ಮತ್ತೆ ಬಿಜೆಪಿಗೆ ಬರುತ್ತೇನೆ. ಮೋದಿ ಮತ್ತು ಅಮಿತ್ ಶಾ ನನ್ನ ಜೊತೆ ಮಾತನಾಡಿದರೆ ಅವರೊಂದಿಗೂ ನನಗೆ ಟಿಕೆಟ್ ನೀಡುವಂತೆ ಕೇಳುತ್ತೇನೆ. ಮುಂದಿನ ತಿಂಗಳು ಉಡುಪಿಗೆ ಆಗಮಿಸುವ ನರೇಂದ್ರ ಮೋದಿ, ನನ್ನನ್ನು ಭೇಟಿಯಾಗಲು ಅಪೇಕ್ಷಿಸಿದರೆ ನಾನು ಅವರನ್ನು ಭೇಟಿ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಬಿಜೆಪಿ ಸದಸ್ಯರಾದವರಿಗೆ ಮಾತ್ರ ಆ ಪಕ್ಷದಲ್ಲಿ ಟಿಕೆಟ್ ನೀಡುವುದಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ನಾವೆಲ್ಲ ಬಿಜೆಪಿಯವರಲ್ಲವೇ ? ನಮ್ಮ ರಕ್ತ ಬಿಜೆಪಿಯದ್ದು, ನಾವು ಕಳೆದ 40 ವರ್ಷಗಳಿಂದ ಬಿಜೆಪಿಗೆ ಮತ ಹಾಕುತ್ತಿದ್ದೇವೆ. ಬಿಜೆಪಿಗೆ ಮತ ಹಾಕಿದವರು ಅದರ ಸದಸ್ಯರೇ ಆಗಿರುತ್ತಾರೆ. ಕಳೆದ ಬಾರಿ ಕಾಂಗ್ರೆಸ್ ಪ್ರಚಾರ ಮಾಡಿರುವುದು ಅಕಸ್ಮಿಕ. ನನಗೆ ಗೆಲ್ಲುವ ವಿಶ್ವಾಸ ಇದೆ. ಉಡುಪಿಯ ಜನತೆ ಮತ ಬೇಧ ಇಲ್ಲದೆ ನಮಗೆ ಸಹಕಾರ ಕೊಟ್ಟು ಗೆಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಶಿರೂರು ಶ್ರೀ ಅಸ್ವಸ್ಥ: ಆಸ್ಪತ್ರೆಯಲ್ಲಿ ಚಿಕಿತ್ಸೆ

ನಾಮಪತ್ರ ಸಲ್ಲಿಸುವ ವೇಳೆ ತೀವ್ರ ಅಸ್ವಸ್ಥಗೊಂಡಿದ್ದ ಶಿರೂರು ಸ್ವಾಮೀಜಿ ಮಧ್ಯಾಹ್ನ ವೇಳೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಕಡಿಯಾಳಿ ದೇವಸ್ಥಾನದಲ್ಲಿ ಪೂಜೆಯ ಸಂದರ್ಭ ಅಸ್ವಸ್ಥರಾದ ಸ್ವಾಮೀಜಿ ಕೆಳಹೊತ್ತು ಅಲ್ಲೇ ಕುಳಿತು ಎಳನೀರು ಸೇವಿಸಿದರು. ನಂತರ ಅಲ್ಲಿಂದ ನಾಮ ಪತ್ರ ಸಲ್ಲಿಸಲು ಆಗಮಿಸಿದ ಸ್ವಾಮೀಜಿ ಮೊದಲನೆ ಮಹಡಿಯಲ್ಲಿರುವ ಕಚೇರಿಗೆ ತೆರಳಲು ಸಾಧ್ಯವಾಗದೆ ಕೆಳಗೆ ಕೊಠಡಿಯಲ್ಲಿ ಸುಮಾರು ಅರ್ಧ ತಾಸು ವಿಶ್ರಾಂತಿ ಪಡೆದರು.

ಅಲ್ಲಿ ಕೂಡ ಎಳನೀರು ಸೇವಿಸಿದ ಸ್ವಾಮೀಜಿ, ಬಳಿಕ ಮೊದಲನೆ ಮಹಡಿಗೆ ಹೋಗಿ ನಾಮಪತ್ರ ಸಲ್ಲಿಸಿದರು. ಅಲ್ಲಿಂದ ನೇರ ಉಡುಪಿಯ ಖಾಸಗಿ ಆಸ್ಪತ್ರೆ ಯೊಂದಕ್ಕೆ ತೆರಳಿದ ಅವರು ಸಂಜೆಯವರಿಗೆ ಚಿಕಿತ್ಸೆ ಪಡೆದು ತೆರಳಿದರೆನ್ನಲಾಗಿದೆ. ಕಳೆದ ಎರಡು ದಿನಗಳಿಂದ ನಿದ್ರೆ ಇಲ್ಲದೆ ಸುಸ್ತಾದ ಕಾರಣ ಸ್ವಾಮೀಜಿ ಅಸ್ವಸ್ಥಗೊಂಡಿದ್ದರೆಂದು ತಿಳಿದುಬಂದಿದೆ.

13.69 ಲಕ್ಷ ರೂ. ಮೌಲ್ಯದ ಆಸ್ತಿ ಘೋಷಣೆ
ಶಿರೂರು ಸ್ವಾಮೀಜಿ ನಾಮಪತ್ರದ ಅಫಿಡವಿತ್‌ನಲ್ಲಿ 13.69 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ.
50 ಸಾವಿರ ರೂ. ನಗದು, ಕೆನರಾ ಮತ್ತು ವಿಜಯ ಬ್ಯಾಂಕಿನಲ್ಲಿ 98,800 ರೂ. ಮೌಲ್ಯದ ಶೇರು, 12 ಲಕ್ಷ ರೂ. ಮೌಲ್ಯದ 400 ಗ್ರಾಂ ಚಿನ್ನ ಹೊಂದಿದ್ದು, ಯಾವುದೇ ಸ್ಥಿರಾಸ್ತಿ ಹೊಂದಿಲ್ಲ ಎಂದು ಅಫಿದವಿತ್‌ನಲ್ಲಿ ತಿಳಿಸಿದ್ದಾರೆ. ಅವರ ಒಟ್ಟು ಚರಾಸ್ಥಿಯ ಮೌಲ್ಯ 13,69,042.41ರೂ. ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News