×
Ad

ಟಿಕೆಟ್ ಹಂಚಿಕೆ ರಾಷ್ಟ್ರೀಯ ಅಧ್ಯಕ್ಷರಿಂದ ಆಗಿದ್ದು: ಪಾಲೆಮಾರ್ ಆರೋಪಕ್ಕೆ ಸಂಸದ ನಳಿನ್ ಪ್ರತಿಕ್ರಿಯೆ

Update: 2018-04-21 19:36 IST

ಮಂಗಳೂರು, ಎ. 21: ಪಾಲೆಮಾರ್ ಹಿರಿಯ ನಾಯಕರು. ಜಿಲ್ಲೆಯಲ್ಲಿ ಎರಡು ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದವರು. ಅಭಿವೃದ್ಧಿ ಕಾರ್ಯ ಮಾಡಿದವರು. ನಾನು ಗೌರವಿಸುವ ನಾಯಕರು. ಈ ಬಾರಿ ಆಕಾಂಕ್ಷಿಯೂ ಆಗಿದ್ದರು. ಈ ಬಾರಿಯ ಪಕ್ಷದ ಟಿಕೆಟ್ ಹಂಚಿಕೆ ರಾಷ್ಟ್ರೀಯ ಅಧ್ಯಕ್ಷರಿಂದ ಆಗಿರುವಂತದ್ದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮಾಜಿ ಸಚಿವ ಪಾಲೆಮಾರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ಸಚಿವ ಧರ್ಮೇದ್ರ ಪ್ರಧಾನ್‌ ಅವರ ಭೇಟಿ ಕಾರ್ಯಕ್ರಮದ ವೇಳೆ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಪಾಲೆಮಾರ್ ಟಿಕೆಟ್ ಸಿಗದಿರುವ ನೋವಿನಿಂದ ನನ್ನ ಹೆಸರು ಉಲ್ಲೇಖಿಸಿದ್ದಾರೆ. ಆದರೆ ನಾನು ಯಾರ ಪರವಾಗಿಯೂ ಬ್ಯಾಟಿಂಗ್ ಮಾಡುವ ಅಥವಾ ಕೇಳುವ, ಕೊಡುವ ಹಕ್ಕು ನನಗಿಲ್ಲ. ನಾನೊಬ್ಬ ಸಂಸದನಾಗಿ ನಾನೂ ಒಬ್ಬ ಕಾರ್ಯಕರ್ತ. ಕ್ಷೇತ್ರದಿಂದ ಬಂದಿರುವ ಎಲ್ಲರ ಹೆಸರನ್ನೂ ರವಾನೆ ಮಾಡಿದ್ದೇವೆ. ಅವರು ನೋವಿನಿಂದ, ಪ್ರೀತಿಯಿಂದಲೂ ಉಲ್ಲೇಖ ಮಾಡಿರಬಹುದು. ಮಾತುಕತೆಯಿಂದ ಇದನ್ನು ಬಗೆಹರಿಸಲಾಗುವುದು ಎಂದವರು ಹೇಳಿದರು.

ಸುರತ್ಕಲ್ ಕ್ಷೇತ್ರದ ಮತ್ತೋರ್ವ ಟಿಕೆಟ್ ಆಕಾಂಕ್ಷಿ ಸತ್ಯಜಿತ್ ಸುರತ್ಕಲ್ ಅವರ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಳಿನ್, ಪಕ್ಷದ ಕಾರ್ಯಕರ್ತರು ಎಲ್ಲರೂ ಕೆಲಸ ಮಾಡಿದ್ದಾರೆ. ಕೆಲಸ ಮಾಡಿ ಟಿಕೆಟ್ ಬಯಸುವ ಹಕ್ಕು ಅವರಿಗಿದೆ. ಅದರಲ್ಲಿ ತಪ್ಪಿಲ್ಲ. ಸಿಗದಿದ್ದಾಗ ನೋವಿನಲ್ಲಿ ಆ ಮಾತುಗಳನ್ನು ಹೇಳಿರಬಹುದು. ಅವರನ್ನು ಸಮಾಧಾನ ಮಾಡಿಕೊಂಡು ಎಲ್ಲರನ್ನೂ ಒಟ್ಟಾಗಿಸಿಕೊಂಡು ಹೋಗುವ ಜವಾಬ್ಧಾರಿ ಎಲ್ಲರದ್ದು. ಇದನ್ನು ರಾಜ್ಯ ಹಾಗೂ ರಾಷ್ಟ್ರದ ನಾಯಕರ ಗಮನಕ್ಕೆ ತರಲಾಗುವುದು. ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ಕಲ್ಪಿಸಲಾಗುವುದು. ಹಿಂದೂ ಸಮಾಜದ ಕಾರ್ಯ ಮಾಡುವ ಕಾರ್ಯಕರ್ತರು, ಹತ್ತಾರು ಸಮಸ್ಯೆಗಳ ಮಧ್ಯೆ ಹೋರಾಟ ಮಾಡುವ ಕಾರ್ಯಕರ್ತರಿಗೂ ಅವಕಾಶ ಸಿಗಬೇಕು. ಅವಕಾಶವಿದೆ. ಹಿರಿಯರ ಗಮನಕ್ಕೆ ತರಲಾಗಿದೆ ಎಂದರು.

ಟಿಕೆಟ್‌ನಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ನಳಿನ್, ಅದರ ಬಗ್ಗೆ ತನಗೆ ತಿಳಿದಿಲ್ಲ. ಇಲ್ಲಿ ನಡೆದಿರುವ ವಿಚಾರಗಳನ್ನು ಹಿರಿಯರ ಗಮನಕ್ಕೆ ತರುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News