ಐಪಿಎಲ್: ಕಿಂಗ್ಸ್ ಇಲೆವೆನ್‌ಗೆ ಭರ್ಜರಿ ಜಯ

Update: 2018-04-21 16:03 GMT

ಕೋಲ್ಕತಾ, ಎ.21: ಐಪಿಎಲ್ ಟ್ವೆಂಟಿ-20 ಟೂರ್ನಿಯ 18ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ವಿರುದ್ಧ ಕಿಂಗ್ಸ್ ಇಲೆವೆನ್ ತಂಡ 9 ವಿಕೆಟ್‌ಗಳ ಜಯ ಗಳಿಸಿದೆ

 ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಡಕ್‌ವರ್ಥ್ ಲೂವಿಸ್ ನಿಯಮದಂತೆ 13 ಓವರ್‌ಗಳಲ್ಲಿ ಗೆಲುವಿಗೆ 125 ರನ್‌ಗಳ ಸವಾಲು ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ 1 ವಿಕೆಟ್ ನಷ್ಟದಲ್ಲಿ 126 ರನ್ ಗಳಿಸಿತು.

ಆರಂಭಿಕ ದಾಂಡಿಗರಾದ ಕ್ರಿಸ್ ಗೇಲ್ ಔಟಾಗದೆ 62 ರನ್ (38ಎ, 5ಬೌ,6ಸಿ) ಮತ್ತು ಲೋಕೇಶ್ ರಾಹುಲ್ 60 ರನ್(27ಎ, 9ಬೌ,2ಸಿ) ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಾಯಾಂಕ್ ಅಗರ್‌ವಾಲ್ ಔಟಾಗದೆ 2 ರನ್ ಗಳಿಸಿದರು.

192 ರನ್‌ಗಳ ಸವಾಲು ಪಡೆದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟಿಂಗ್‌ಗೆ ಆರಂಭದಲ್ಲಿ ಮಳೆ ಅಡ್ಡಿಪಡಿಸಿತ್ತು. ಕಿಂಗ್ಸ್ ಇಲೆವೆನ್ 8.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 96 ರನ್ ಗಳಿಸಿದ್ದಾಗ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತು.

ಆಟ ನಿಂತಾಗ ಆರಂಭಿಕ ದಾಂಡಿಗರಾದ ಲೋಕೇಶ್ ರಾಹುಲ್ 46 ರನ್(23ಎ, 7ಬೌ,1ಸಿ) ಮತ್ತು ಕ್ರಿಸ್ ಗೇಲ್ ಔಟಾಗದೆ 49 ರನ್(27ಎ, 5ಬೌ,4ಸಿ) ಗಳಿಸಿ ಆಡುತ್ತಿದ್ದರು. ಬಳಿಕ ಆಟ ಆರಂಭಗೊಂಡಾಗ ಕಿಂಗ್ಸ್ ಇಲೆವೆನ್ ಗೆಲುವಿಗೆ 13 ಓವರ್‌ಗಳಲ್ಲಿ 125 ರನ್‌ಗಳ ಸವಾಲು ನೀಡಲಾಗಿತ್ತು. ಮೊದಲ ವಿಕೆಟ್‌ಗೆ ರಾಹುಲ್ ಮತ್ತು ಗೇಲ್ 9.4 ಓವರ್‌ಗಳಲ್ಲಿ 116 ರನ್ ಗಳಿಸುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತಾ ನೈಟ್ ರೈಡರ್ಸ್‌ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 191 ರನ್ ಗಳಿಸಿತ್ತು.

ಆರಂಭಿಕ ದಾಂಡಿಗ ಕ್ರಿಸ್ ಲಿನ್ 74 ರನ್(41ಎ, 6ಬೌ, 4 ಸಿ) ಗಳಿಸಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News