ವಿವಿಧ ಪಕ್ಷಗಳ ಅಭ್ಯರ್ಥಿಗಳಿಂದ ಧಾರ್ಮಿಕ ಕೇಂದ್ರಗಳಿಗೆ ‘ರಾಜಕೀಯ’ ಭೇಟಿ
ಮಂಗಳೂರು, ಎ.21: ದ.ಕ.ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸ್ವಕ್ಷೇತ್ರವಲ್ಲದೆ ಪ್ರಮುಖ ಮಸೀದಿ, ಮಂದಿರ, ಚರ್ಚ್, ದೈವಸ್ಥಾನ, ದರ್ಗಾ ಇತ್ಯಾದಿ ಧಾರ್ಮಿಕ ಕೇಂದ್ರಗಳಿಗೆ ‘ರಾಜಕೀಯ’ ಭೇಟಿ ನೀಡುವ ಮೂಲಕ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಮಧ್ಯೆ ಹಿರಿಯ ರಾಜಕಾರಣಿ ಸಹಿತ ಧರ್ಮಗುರುಗಳ ಆಶೀರ್ವಾದ ಪಡೆಯುವ ಧಾವಂತ ಕೂಡ ಹೆಚ್ಚುತ್ತಿದೆ.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆಹಾರ ಸಚಿವ ಯು.ಟಿ.ಖಾದರ್, ಶಾಸಕರಾದ ಬಿ.ಎ.ಮೊಯ್ದಿನ್ ಬಾವ, ಜೆ.ಆರ್.ಲೋಬೊ, ಅಭಯಚಂದ್ರ ಜೈನ್, ವಸಂತ ಬಂಗೇರಾ, ಶಕುಂತಳಾ ಶೆಟ್ಟಿ ಮತ್ತಿತರರು ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಇದ್ದಾರೆ. ಬಹುತೇಕ ಎಲ್ಲರೂ ಕೂಡ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದು, ಧರ್ಮಗುರುಗಳ ವಿಷಯದಲ್ಲೂ ಧರ್ಮಾತೀತರಾಗಿದ್ದಾರೆ.
ಸಚಿವ ಯು.ಟಿ.ಖಾದರ್ ನಾಮಪತ್ರ ಸಲ್ಲಿಕೆಗೆ ಮುನ್ನ ಎ.ಪಿ.ಉಸ್ತಾದ್, ಕೂರತ್ ತಂಙಳ್, ಮಿತ್ತಬೈಲು ಉಸ್ತಾದ್, ತ್ವಾಖಾ ಉಸ್ತಾದ್, ಬಾಯಾರ್ ತಂಙಳ್, ಮಂಜನಾಡಿ ಉಸ್ತಾದ್, ಕುಂಬೋಲ್ ತಂಙಳ್, ಬೇಕಲ ಉಸ್ತಾದ್ ಮೊದಲಾದ ಉಲಮಾ ನಾಯಕರನ್ನು ಭೇಟಿಯಾಗಿ ಆರ್ಶೀವಾದ ಪಡೆಯತ್ತಿದ್ದಾರೆ. ಮತ್ತೊಂದೆಡೆ ಹಿಂದೂ-ಕ್ರೈಸ್ತ ಧರ್ಮದ ಆರಾಧನಾಲಯಗಳು, ಮುಖ್ಯಸ್ಥರು, ಹಿರಿಯರ ಭೇಟಿಯೂ ಮಾಡುತ್ತಿದ್ದಾರೆ. ರಮಾನಾಥ ರೈ, ಮೊಯ್ದಿನ್ ಬಾವ ಕೂಡ ಅದರಲ್ಲಿ ಹಿಂದೆ ಬಿದ್ದಿಲ್ಲ. ಇದು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೂ ಒಳಗಾಗುತ್ತಿದೆ.
ಶಾಸಕ ಜೆ.ಆರ್.ಲೋಬೊ ಸೋಮವಾರ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಬಳಿಯಿಂದ ಮೆರವಣಿಗೆ ಹೊರಡಲು ನಿರ್ಧರಿಸಿದ್ದಾರೆ.
ಪೂಜಾರಿಯ ಆಶೀರ್ವಾದ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ 7 ಸ್ಥಾನ ಪಡೆಯುವಲ್ಲಿ ಹಿರಿಯ ನಾಯಕ ಜನಾರ್ದನ ಪೂಜಾರಿಯ ಶ್ರಮ ಅಪಾರ. ಗೆದ್ದ ಬಳಿಕ 7 ಶಾಸಕರನ್ನು ಕಾಂಗ್ರೆಸ್‌ನ ಚುನಾವಣಾ ಕಚೇರಿಯಲ್ಲಿ ಕೂರಿಸಿಕೊಂಡು ಜನಾರ್ದನ ಪೂಜಾರಿ ಸುದ್ದಿಗೋಷ್ಠಿ ನಡೆಸಿ ‘ಬುದ್ಧಿವಾದ’ ಹೇಳಿದ್ದು ಕೂಡ ಜಗಜ್ಜಾಹೀರು. ಎಲ್ಲರೂ ಒಗ್ಗಟ್ಟಿನಿಂದ ದುಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂದಿದ್ದರು. ಆದರೆ ಬಳಿಕ ಆದದ್ದೆಲ್ಲವೂ ಪೂಜಾರಿ ಮಾತ್ರವಲ್ಲ ಕಾಂಗ್ರೆಸ್‌ಗೂ ಹಿನ್ನಡೆ.
ಇದೀಗ ಸಚಿವ ರೈ, ಶಾಸಕ ಮೊಯ್ದಿನ್ ಬಾವ ಮತ್ತಿತರರು ಪೂಜಾರಿಯ ಆಶೀರ್ವಾದ ಪಡೆಯಲು ದುಂಬಾಲು ಬಿದ್ದಿದ್ದಾರೆ. ಅದರ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಮಧ್ಯೆ ಮಾಜಿ ಕಾಂಗ್ರೆಸ್ಸಿಗ ಹಾಲಿ ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಅಶ್ರಫ್ ಕೂಡ ಆಶೀರ್ವಾದ ಪಡೆದಿದ್ದಾರೆ. ಹೀಗೆ ತನ್ನ ಬಳಿ ಬಂದವರಿಗೆಲ್ಲಾ ಪುಜಾರಿ ಪಕ್ಷಬೇಧ ಮರೆತು ಆಶೀರ್ವಾದ ನೀಡುತ್ತಿರುವುದು ಗಮನಾರ್ಹ.