ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಮ್ಮ ಆಶ್ವಾಸನೆ ಸವಕಲು, ಅಸಮರ್ಪಕ: ಪ್ರಧಾನಿ ಮೋದಿಗೆ ವಿದ್ವಾಂಸರ ಟೀಕೆ

Update: 2018-04-21 17:04 GMT

ಹೊಸದಿಲ್ಲಿ, ಎ.21: ಕಥುವಾ ಹಾಗೂ ಉನ್ನಾವೊ ಅತ್ಯಾಚಾರ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿ ನೀಡಿರುವ ಹೇಳಿಕೆಯನ್ನು ದೇಶ ವಿದೇಶದ 637 ವಿದ್ವಾಂಸರು ಟೀಕಿಸಿದ್ದು, ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಆಶ್ವಾಸನೆ ಅಸಮರ್ಪಕ, ಸವಕಲು ಹಾಗೂ ಅನಿರ್ದಿಷ್ಟವಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದಿರುವ ವಿದ್ವಾಂಸರು ಕಥುವಾ ಹಾಗೂ ಉನ್ನಾವೊ ಅತ್ಯಾಚಾರ ಪ್ರಕರಣಗಳ ಬಗ್ಗೆ ತೀವ್ರ ಆಕ್ರೋಶ ಹಾಗೂ ಕಳವಳ ವ್ಯಕ್ತಪಡಿಸಿದ್ದಾರೆ. ಎರಡೂ ಪ್ರಕರಣಗಳಲ್ಲಿ ಸಂಬಂಧಿತ ರಾಜ್ಯ ಸರಕಾರಗಳು ಆರೋಪಿಗಳ ರಕ್ಷಣೆಗೆ ಪ್ರಯತ್ನಿಸಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಲಾಗಿದೆ. ಅಲ್ಲದೆ ಬಿಜೆಪಿಯ ವಕ್ತಾರರು ಮಾಧ್ಯಮಗಳ ಎದುರು ಇಡೀ ಪ್ರಕರಣದ ಬಗ್ಗೆ ದಾರಿ ತಪ್ಪಿಸುವ, ವಿಷಯಾಂತರಗೊಳಿಸುವ ಪ್ರಯತ್ನ ನಡೆಸಿರುವ ಬಗ್ಗೆಯೂ ಉಲ್ಲೇಖಿಸಲಾಗಿದೆ.

 ಸಂತ್ರಸ್ತರಿಗೆ ನ್ಯಾಯ ಒದಗಿಸಲಾಗುವುದು ಎಂಬ ಸವಕಲು,ಅಸಮರ್ಪಕ ಹೇಳಿಕೆ ನೀಡುವ ಮೂಲಕ ಪ್ರಧಾನಿ ಕೊನೆಗೂ ತಮ್ಮ ಸುದೀರ್ಘ ಮೌನ(ಈಗ ಇದು ಮಾಮೂಲಿಯಾಗಿಬಿಟ್ಟಿದೆ)ವನ್ನು ಮುರಿದಿದ್ದಾರೆ ಎಂದಿರುವ ವಿದ್ವಾಂಸರು, ಕಥುವಾ ಹಾಗೂ ಉನ್ನಾವೊ ಪ್ರಕರಣಗಳನ್ನು ಪ್ರತ್ಯೇಕಿಸುವಂತಿಲ್ಲ. ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯದವರ , ದಲಿತರ, ಆದಿವಾಸಿಗಳ ಹಾಗೂ ಮಹಿಳೆಯರ ಮೇಲೆ ಈ ದೇಶದಲ್ಲಿ ಪದೇ ಪದೇ ನಡೆಯುತ್ತಿರುವ ದಾಳಿಯ ಒಂದು ಭಾಗವಾಗಿದೆ.ಈ ಎಲ್ಲಾ ದಾಳಿಗಳಲ್ಲಿ ಅತ್ಯಾಚಾರ ಹಾಗೂ ಹಲ್ಲೆ ಮಾಡುವುದನ್ನು ಹಿಂಸೆಯ ಒಂದು ಆಯುಧವಾಗಿ ಗೋರಕ್ಷಕರು ಹಾಗೂ ಇತರರು ಬಳಸಿದ್ದಾರೆ. ಉತ್ತರಪ್ರದೇಶದ ದಾದ್ರಿಯಲ್ಲಿ (2015), ಜಮ್ಮು ಮತ್ತು ಕಾಶ್ಮೀರದ ಉಧಂಪುರ(2015), ಛತ್ತೀಸ್‌ಗಢದ ಬಿಜಾಪುರ ಹಾಗೂ ಸುಕ್ಮಾ (2015-16), ಮಧ್ಯಪ್ರದೇಶದ ಹರ್ದ(2016), ಜಾರ್ಖಂಡ್‌ನ ಲತೆಹಾರ್(2016), ಗುಜರಾತ್‌ನ ಉನಾ (2016), ಹರ್ಯಾಣದ ರೋಹ್ಟಕ್(2017), ಉತ್ತರಪ್ರದೇಶದ ಸಹಾರನ್‌ಪುರ (2017), ಮತ್ತು ಈಗ ಜಮ್ಮು-ಕಾಶ್ಮೀರದ ಕಥುವಾ ಹಾಗೂ ಉತ್ತರಪ್ರದೇಶದ ಉನ್ನಾವೊ. ಇವಲ್ಲಿ ಹೆಚ್ಚಿನವು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಂಭವಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ನಿಮ್ಮ ಪಕ್ಷ (ಬಿಜೆಪಿ) ಹಾಗೂ ಬಿಜೆಪಿ ಸರಕಾರ ಈ ದುಷ್ಕೃತ್ಯಗಳಿಗೆ ಕಾರಣ ಎಂದು ನಾವು ಹೇಳುತ್ತಿಲ್ಲ. ಆದರೆ ನಿಮ್ಮ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಹೆಚ್ಚಿನ ಪ್ರಕರಣ ನಡೆದಿದೆ. ಆದರೆ ಸರಕಾರ ಕ್ರಮ ಕೈಗೊಂಡಿರುವ ಬಗ್ಗೆ ಹೆಚ್ಚಿನ ಪುರಾವೆಯಿಲ್ಲ. ಸಮಾಜದ ದುರ್ಬಲ ವರ್ಗದವರಿಗೆ ನೆರವಾಗುವ, ಆದಿವಾಸಿಗಳಿಗೆ ಹಾಗೂ ನೊಮಾಡ ಸಮುದಾಯದವರಿಗೆ ಅರಣ್ಯ ಹಾಗೂ ಆಸ್ತಿ ಹಕ್ಕು ನೀಡಲು ಅಥವಾ ಕಾನೂನು ಉಲ್ಲಂಘಿಸಿ ದುರ್ಬಲ ವರ್ಗದವರ ಮೇಲೆ ನಡೆಯುತ್ತಿರುವ ಆಕ್ರಮಣವನ್ನು ತಡೆಯುವ ಪ್ರಯತ್ನ ಆಗಿಲ್ಲ ಎಂದು ಪತ್ರದಲ್ಲಿ ದೂರಲಾಗಿದೆ.

   ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ನ ಹೇಳಿಕೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆ ದೂರು ದಾಖಲಿಸಲು ಬಂದಾಗ ಪೊಲೀಸರು ನಡೆದುಕೊಂಡ ರೀತಿ ಸರಿಯಿಲ್ಲ.ಇದೇ ರೀತಿಯ ನಿಲುವು ನಿಮ್ಮದಾಗಿದ್ದರೆ ಆಗ ರಾಜ್ಯದಲ್ಲಿ ಕಾನೂನು ಮತ್ತು ಶಿಸ್ತು ಕುಸಿದಿದೆ ಎಂದು ಹೇಳಬೇಕಾಗುತ್ತದೆ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

   ಈ ಪತ್ರ ಬರೆಯುವುದು ನಮ್ಮ ಕರ್ತವ್ಯವಾಗಿದೆ. ನಾವು ಮೌನವಹಿಸುವ ತಪ್ಪು ಮಾಡಲು ಸಿದ್ಧರಿಲ್ಲ. ಈ ಮೂಲಕವಾದರೂ ಪುಟ್ಟ ಹುಡುಗಿಯ ದೇಹ ಛಿದ್ರಗೊಳಿಸಿದ ಹಾಗೂ ಯುವತಿಯ ಮೇಲೆ ನಡೆದ ಅತ್ಯಾಚಾರದಂತಹ ಅಮಾನುಷ, ಹೇಡಿತನದ ಕೃತ್ಯಗಳನ್ನು ಒಪ್ಪಿಕೊಳ್ಳಲು ನಿರಾಕರಿಸುವ ಪ್ರಯತ್ನಗಳಿಗೆ ಮುನ್ನುಡಿಯಾಗಲಿ ಎಂದು ನಾವು ಬಯಸುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News