×
Ad

ಶಾಸಕನಾದರೆ ಬೂತ್‌ಮಟ್ಟದಲ್ಲಿ ಜನಸಂಪರ್ಕ ಸಭೆ: ಸಚಿವ ಪ್ರಮೋದ್

Update: 2018-04-22 19:34 IST

ಉಡುಪಿ, ಎ.22: ಮತ್ತೊಮ್ಮೆ ಶಾಸಕನಾಗಿ ಆರಿಸಿ ಬಂದರೆ ಉಡುಪಿ ವಿಧಾನಸಭಾ ಕ್ಷೇತ್ರದ 213 ಬೂತ್‌ಗಳಲ್ಲಿ ಪ್ರತಿ ವರ್ಷ ಎಲ್ಲ ಇಲಾಖೆಯ ಅಧಿಕಾರಿಗಳೊಂದಿಗೆ ಜನ ಸಂಪರ್ಕ ಸಭೆ ನಡೆಸಿ, ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಚಿವ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದ ಉಡುಪಿ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಜಂಟಿ ಆಶ್ರಯದಲ್ಲಿ ರವಿವಾರ ಕಲ್ಸಂಕ ರೋಯಲ್ ಗಾರ್ಡನ್‌ನಲ್ಲಿ ಆಯೋಜಿಸಲಾದ ಜನಾಶೀರ್ವಾದ ಸಮಾವೇಶದಲ್ಲಿ ಅವರು ಮಾತನಾಡುತಿದ್ದರು.

ಬಾಕಿ ಇರುವ ಎಲ್ಲ ಕೆಲಸಗಳನ್ನು ಮುಂದಿನ ಐದು ವರ್ಷಗಳಲ್ಲಿ ಪೂರ್ಣ ಗೊಳಿಸುತ್ತೇನೆ. ನಿವೇಶನ ರಹಿತರಿಗೆ ನಿವೇಶನ ಹಾಗೂ ಮನೆ ನಿರ್ಮಿಸಿಕೊಡುವ ಸಂಕಲ್ಪವನ್ನು ಹೊಂದಿದ್ದೇನೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕ್ಷೇತ್ರದ ಜನರಿಗೆ ನೀಡಿದ ಬಹುತೇಕ ಭರವಸೆಯನ್ನು ಈಡೇರಿಸಿದ್ದೇನೆ. ಮುಖ್ಯಮಂತ್ರಿ ಜೊತೆ ಕಾಡಿಬೇಡಿ ಕೋಟ್ಯಂತರ ರೂ. ಅನುದಾನವನ್ನು ಕ್ಷೇತ್ರಕ್ಕೆ ತಂದು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ. ಆ ಬಗ್ಗೆ ನನಗೆ ತೃಪ್ತಿ ಇದೆ. ಐದು ವರ್ಷ ನಾನು ನಿಮ್ಮ ಚಕಾರಿ ಮಾಡಿದ್ದೇನೆ. ಈಗ ನೀವು ನನ್ನನ್ನು ಗೆಲ್ಲಿ ಸುವ ಜವಾಬ್ದಾರಿ ಹೊಂದಿದ್ದೀರಿ ಎಂದು ಅವರು ಹೇಳಿದರು.

ಸಮಾವೇಶವನ್ನು ಉದ್ಘಾಟಿಸಿದ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಮಾತನಾಡಿ, ರಾಜ್ಯ ಸರಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳು ಮಾತ್ರವಲ್ಲದೆ ಹೆಚ್ಚುವರಿ ಯೋಜನೆಗಳನ್ನು ಜಾರಿಗೆ ತಂದಿದೆ. ಯಡಿಯೂರಪ್ಪ ಸರಕಾರ ದೇಶದಲ್ಲೇ ನಂಬರ್ ಒನ್ ಭ್ರಷ್ಟ ಸರಕಾರ ಎಂದು ಅಮಿತ್ ಶಾ ನಿಜವನ್ನೇ ಹೇಳಿದ್ದಾರೆ. ಇದನ್ನು ದೇವರೇ ಅವರ ಮೂಲಕ ಹೇಳಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಂಸದೆಯಾದ ಬಳಿಕ ನಾಲ್ಕು ವರ್ಷಗಳ ಕಾಲ ಕ್ಷೇತ್ರಕ್ಕೆ ಕಾಲಿಡದ ಶೋಭಾ ಕರಂದ್ಲಾಜೆ ಅವರಿಗೆ ಚುನಾವಣಾ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ಮುಖ ತೋರಿಸುವ ಯಾವುದೇ ನೈತಿಕತೆ ಇಲ್ಲ. ಕೇಂದ್ರ ಸರಕಾರ ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸೊರಕೆ ಟೀಕಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಕರವಾಳಿಯಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲುವ ಮೂಲಕ ಮತ್ತೆ ರಾಜ್ಯ ದಲ್ಲಿ ಅಧಿಕಾರಕ್ಕೆ ಬರಲಿದೆ. ಪ್ರಮೋದ್ ಮಧ್ವರಾಜ್ ಹಾಗೂ ವಿನಯ ಕುಮಾರ್ ಸೊರಕೆ ಇಡೀ ರಾಜ್ಯದಲ್ಲೇ ಅತಿ ಹೆಚ್ಚಿನ ಮತಗಳ ಅಂತರದಲ್ಲಿ ಜಯಗಳಿಸಬೇಕು ಎಂದು ಹಾರೈಸಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್ ಮುಖ್ಯ ಅತಿಥಿ ಗಳಾಗಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್ ಮಾಜಿ ಮುಖಂಡ ಲೂವಿಸ್ ಲೋಬೊ ಸೇರಿದಂತೆ ಹಲವು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ನರಸಿಂಹಮೂರ್ತಿ, ಸುಧಾಕರ್ ಶೆಟ್ಟಿ ಮೈಮಾರ್ಡಿ, ಅಶೋಕ್ ಕೊಡವೂರು, ದಿನೇಶ್ ಪುತ್ರನ್, ವರೋನಿಕಾ ಕರ್ನೆಲಿಯೋ, ಗೀತಾ ವಾಗ್ಳೆ, ಪ್ರಖ್ಯಾತ್ ಶೆಟ್ಟಿ, ಅಮೃತ್ ಶೆಣೈ, ಇಸ್ಮಾಯಿಲ್ ಆತ್ರಾಡಿ, ದೇವಿಪ್ರಸಾದ್ ಶೆಟ್ಟಿ, ಸರಳ ಕಾಂಚನ್, ಮೀನಾಕ್ಷಿ ಮಾಧವ ಬನ್ನಂಜೆ, ವಿಶ್ವಾಸ್ ಅಮೀನ್, ರಮೇಶ್ ಕಾಂಚನ್, ಜನಾರ್ದನ ಭಂಡಾರ್ಕರ್, ಎಸ್.ನಾರಾಯಣ, ಸಂಧ್ಯಾ ತಿಲಕ್ ರಾಜ್, ಬೇಬಿ ಸಾಲ್ಯಾನ್, ಯಶೋಧರ ಅಮೀನ್, ಯತೀಶ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಸ್ವಾಗತಿಸಿದರು. ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ಹಾರಾಡಿ ನಿತ್ಯಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಉಡುಪಿ ಬ್ಲಾಕ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ವಂದಿಸಿದರು. ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಈ ಅಭೂತಪೂರ್ವ ಸಮಾ ವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನರು ಸಾಕ್ಷಿಯಾದರು.

‘ಸಚಿವ ಸ್ಥಾನ ತಪ್ಪಲು ಪ್ರಮೋದ್ ಕಾರಣರಲ್ಲ’

‘ನನಗೆ ಸಚಿವ ಸ್ಥಾನ ತಪ್ಪಿ ಹೋಗಲು ಪ್ರಮೋದ್ ಮಧ್ವರಾಜ್ ಕಾರಣ ಅಲ್ಲ. ನನಗೆ ಸಚಿವ ತಪ್ಪುದಕ್ಕೂ ಪ್ರಮೋದ್ ಮಧ್ವರಾಜ್‌ಗೂ ಯಾವುದೇ ಸಂಬಂಧ ಇಲ್ಲ’ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸ್ಪಷ್ಟಪಡಿಸಿದ್ದಾರೆ.

ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ ಸಚಿವರಾಗಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದರು. ಹಾಗಾಗಿ ಜಾತಿ ಕೋಟಾದಡಿ ನನ್ನ ಸಚಿವ ಸ್ಥಾನ ಅವರಿಗೆ ಸಿಕ್ಕಿತು. ಬಾಬುರಾವ್ ಚಿಂಚನೂರ್ ಅವರಿಂದ ತೆರವಾದ ಸ್ಥಾನದಿಂದ ಪ್ರಮೋದ್ ಮಧ್ವರಾಜ್ ಅವರಿಗೆ ಸಚಿವ ಸ್ಥಾನ ದೊರೆತಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News