ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾದ ಕ್ಲಾಸ್‌ಮೇಟ್‌ಗಳು !

Update: 2018-04-24 03:57 GMT
ಪ್ರಮೋದ್ ಮಧ್ವರಾಜ್ - ರಘುಪತಿ ಭಟ್

ಒಂದೇ ತರಗತಿಯಲ್ಲಿ ಕೂತು ಪಾಠ ಕೇಳಿದ ಕ್ಲಾಸ್‌ಮೇಟ್‌ಗಳು ಇಂದು ಚುನಾವಣೆಯಲ್ಲಿ ಮತ್ತೊಮ್ಮೆ ಪರಸ್ಪರ ಪ್ರಬಲ ಎದುರಾಳಿಗಳಾಗಿದ್ದಾರೆ.

ಇವರು ಬೇರೆ ಯಾರು ಅಲ್ಲ, ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ರಘುಪತಿ ಭಟ್. ಈ ರೀತಿ ಇವರು ಎರಡನೆ ಬಾರಿಗೆ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸುತ್ತಿದ್ದಾರೆ.

ಕುಂಜಿಬೆಟ್ಟು ಇಎಂಎಚ್‌ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರನೆ ತರಗತಿಯಿಂದ 10ನೆ ತರಗತಿಯವರೆಗೆ ಇವರಿಬ್ಬರು ಕ್ಲಾಸ್‌ಮೇಟ್‌ಗಳಾಗಿ ಒಂದೇ ತರಗತಿಯಲ್ಲಿ ಕೂತು ಪಾಠ ಕೇಳುತ್ತಿದ್ದರು. ಆದರೆ ಈಗ ಪ್ರಮುಖ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಾಗಿ ಚುನಾವಣಾ ಕಣದಲ್ಲಿದ್ದಾರೆ.

2008ರ ವಿಧಾನಸಭಾ ಚುನಾವಣೆಯಲ್ಲಿ ಇವರಿಬ್ಬರು ಮೊದಲ ಬಾರಿಗೆ ಉಡುಪಿ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳಾಗಿದ್ದರು. ಇದರಲ್ಲಿ ಕೆ.ರಘುಪತಿ ಭಟ್ 2479 ಮತಗಳ ಅಂತರದಲ್ಲಿ ಜಯಗಳಿದ್ದರು. 2013ರ ಚುನಾವಣೆಯಲ್ಲಿ ರಘುಪತಿ ಭಟ್ ವಿರುದ್ಧ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಚುನಾವಣಾ ಕಣದಿಂದ ಹಿಂದೆ ಸರಿದ ಕಾರಣ ಪ್ರಮೋದ್ ಮಧ್ವರಾಜ್ ಅವರಿಗೆ ಸುಧಾಕರ್ ಶೆಟ್ಟಿ ಪ್ರತಿಸ್ಪರ್ಧಿಯಾಗಿದ್ದರು. ಇದರಲ್ಲಿ ಪ್ರಮೋದ್ ಮಧ್ವರಾಜ್ ಜಯಭೇರಿ ಗಳಿಸಿದ್ದರು. ಇದೀಗ ಮತ್ತೊಮ್ಮೆ ಕ್ಲಾಸ್‌ಮೇಟ್‌ಗಳು ಚುನಾವಣಾ ಕಣದಲ್ಲಿ ಎದುರಾಳಿಗಳಾಗಿ ಸ್ಪರ್ಧಿಸುತ್ತಿದ್ದಾರೆ.

‘ಕುಂಜಿಬೆಟ್ಟು ಇಎಂಎಚ್‌ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರನೆ ತರಗತಿಯಿಂದ 10ನೆ ತರಗತಿಯವರೆಗೆ ನಾವಿಬ್ಬರು ಕ್ಲಾಸ್‌ಮೇಟ್‌ಗಳಾಗಿದ್ದೇವು. ನಾನು ಯಾರನ್ನು ದ್ವೇಷಿಸುವುದಿಲ್ಲ. ರಘುಪತಿ ಭಟ್ ವೇದಿಕೆಯಲ್ಲಿ ಸಿಕ್ಕಾಗ ನಾನು ಮಾತನಾಡಿಸುತ್ತೇನೆ. ಅವರು ಶಾಸಕನಾಗಿದ್ದಾಗ ನನ್ನನ್ನು ನೋಡಿ ಮುಖ ತಿರುಗಿಸುತ್ತಿದ್ದರು. ಆದರೆ ನಾನು ಆ ರೀತಿ ಎಂದಿಗೂ ಮಾಡಲ್ಲ’ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News