ವಸ್ತುನಿಷ್ಠ ವರದಿಗೆ ಒತ್ತು ನೀಡಿ: ವಾರ್ತಾಧಿಕಾರಿ ರೋಹಿಣಿ ಕಿವಿಮಾತು
ಕಾಪು, ಎ.24: ಚುನಾವಣೆ ಸಂದರ್ ಪತ್ರಕರ್ತರು ಸಾಕಷ್ಟು ಜಾಗರೂಕತೆಯಿಂದ ವಸ್ತುನಿಷ್ಠ ವರದಿಗಾರಿಕೆಗೆ ಹೆಚ್ಚು ಒತ್ತು ನೀಡಬೇಕು ಉಡುಪಿ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕಿವಿಮಾತು ಹೇಳಿದ್ದಾರೆ.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾಪು ಪ್ರೆಸ್ ಕ್ಲಬ್ ಕಚೇರಿಯಲ್ಲಿ ಮಂಗಳವಾರ ನಡೆದ ‘ಚುನಾವಣೆ ವೇಳೆ ಮಾಧ್ಯಮ ಪ್ರತಿನಿಧಿಗಳು ಎದುರಿಸಬೇಕಾದ ಸವಾಲುಗಳು’ ಎಂಬ ವಿಷಯದ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಾಮಾಜಿಕ ಕಳಕಳಿ, ಬದ್ಧತೆಯೊಂದಿಗೆ ಪತ್ರಕರ್ತರು ಕಾರ್ಯನಿರ್ವಹಿಸಿದರೆ ಯಾವುದೇ ಸಮಸ್ಯೆಗಳು ಎದುರಾಗದು. ಸಮಾಜದಲ್ಲಿ ಮಾಧ್ಯಮದವರಿಗೆ ಗೌರವದ ಸ್ಥಾನಮಾನವಿದ್ದು, ಅದನ್ನು ಉಳಿಸಿಕೊಳ್ಳಲು ಉತ್ತಮ ವ್ಯಕ್ತಿತ್ವದೊಂದಿಗೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಉಡುಪಿ ನಗರ ಸಭೆಯ ಪೌರಾಯುಕ್ತ, ಚುನಾವಣಾ ನೋಡಲ್ ಅಧಿಕಾರಿ ಜನಾರ್ದನ್ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಮಾಧ್ಯಮದವರಿಗೂ ಅನ್ವಯವಾಗುವುದರಿಂದ ಬಲು ಎಚ್ಚರಿಕೆಯಿಂದ ಸಂಘಟಿತರಾಗಿ ಈ ವೇಳೆ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಬಳಿಕ ಅಧಿಕಾರಿಗಳೊಂದಿಗೆ ಮಾಧ್ಯಮ ಮಿತ್ರರು ಸಂವಾದ ನಡೆಸಿದರು.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ ಸುವರ್ಣ ಕಟಪಾಡಿ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಸಂತೋಷ್ ಕಾಪು ಉಪಸ್ಥಿತರಿದ್ದರು.
ಹರೀಶ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಕರುಣಾಕರ ನಾಯಕ್ ವಂದಿಸಿದರು.