ಆಡಳಿತ ಪಕ್ಷವು ಸಿದ್ಧಾಂತದ ಬಗ್ಗೆ ಅಲ್ಲ, ಆಡಳಿತದ ಬಗ್ಗೆ ಮಾತನಾಡಬೇಕು: ಪ್ರಕಾಶ್ ರೈ

Update: 2018-04-24 15:29 GMT

ಉಡುಪಿ, ಎ.24: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಪಕ್ಷ ಜನರಿಂದ ಗೆದ್ದು ಬಂದ ನಂತರ ಧರ್ಮ ರಾಜಕೀಯ ಮಾಡಬಾರದು. ಅದು ಸಿದ್ಧಾಂತದ ಬಗ್ಗೆ ಮಾತನಾಡಬಾರದು. ಕೇವಲ ಆಡಳಿತದ ಬಗ್ಗೆ ಯೋಚಿಸಬೇಕು, ಮಾತನಾಡಬೇಕು. ಆದರೆ ಕೇಂದ್ರದಲ್ಲಿರುವ ಬಿಜೆಪಿ ಸರಕಾರವನ್ನು ನನ್ನಂಥ ಸಾಮಾನ್ಯ ಪ್ರಜೆ ಪ್ರಶ್ನೆ ಮಾಡಿದರೆ ಆತನನ್ನು ಹೆದರಿಸಿ, ಬೆದರಿಸಿ ಬಾಯಿ ಮುಚ್ಚಿಸುವ ಪ್ರಯತ್ನ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಖ್ಯಾತ ಚಿತ್ರನಟ ನಿರ್ದೇಶಕ ಪ್ರಕಾಶ್ ರೈ ಹೇಳಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿಂದು ಸುದ್ದಿಗಾರರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಬಿಜೆಪಿ ಹಿಂದು ಧರ್ಮವನ್ನೇನು ಗುತ್ತಿಗೆ ಪಡೆದಿಲ್ಲ, ಸರಕಾರ ರಚನೆ ಮಾಡಿದ ಮೇಲೆ ಧರ್ಮ, ಜಾತಿ ಯಾಕೆ? ಬೆಂಕಿ ಹಾಕುವ ಮಾತುಗಳು ಯಾಕೆ? ಎಂದು ಪ್ರಶ್ನಿಸಿದರು.

ನಾನು ಹಿಂದೂ ವಿರೋಧಿಯಲ್ಲ. ಯಾವ ಧರ್ಮದ ವಿರೋಧಿಯೂ ಅಲ್ಲ. ಧರ್ಮ ಬೆಂಕಿ ಹಚ್ಚಬಾರದು, ದೀಪ ಉರಿಸಿ ಬೆಳಕು ಹರಿಸಬೇಕು ಎಂದರು. ಬಿಜೆಪಿ ಒಂದು ಪ್ರಾಣಾಂತಿಕ ಕಾಯಿಲೆ ಇದ್ದಂತೆ. ಮೊದಲು ಈ ಸಮಸ್ಯೆಯನ್ನು ಬಗೆಹರಿಸಬೇಕು. ಇದಕ್ಕಾಗಿ ನಾನು ಬಿಜೆಪಿಯನ್ನು ಸದಾ ಪ್ರಶ್ನಿಸುತ್ತೇನೆ. ಆದರೆ ಅವರೆಂದೂ ಚರ್ಚೆಗೆ ಬರುವುದಿಲ್ಲ. ಪ್ರಶ್ನೆಗೆ ಉತ್ತರ ನೀಡುವುದಿಲ್ಲ. ಬದಲು ನಮ್ಮನ್ನು ಹೆದರಿಸಿ, ಬೆದರಿಸಿ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಾರೆ. ಹೆದರದ ನಮ್ಮಂಥವರನ್ನು ಹಿಂದೂ ವಿರೋಧಿ, ದೇಶದ್ರೋಹಿ ಎಂದು ಬ್ರಾಂಡ್ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಅಸಭ್ಯ ರೀತಿಯಲ್ಲಿ ಅವಮಾನ, ಅಪಮಾನ ಮಾಡಿ, ದೇಶ ಬಿಟ್ಟುಹೋಗಿ, ಪಾಕಿಸ್ತಾನಕ್ಕೆ ಹೋಗಿ ಎಂದು ಮಾನಸಿಕ ಸ್ಥೈರ್ಯ ಕುಗ್ಗಿಸಲು ಪ್ರಯತ್ನಿಸುತ್ತಾರೆ ಎಂದು ಪ್ರಕಾಶ್ ರೈ ಹೇಳಿದರು.

ಒಬ್ಬ ಬಹುಮತದೊಂದಿಗೆ ಜನಪ್ರತಿನಿಧಿಯಾಗಿ ಆಯ್ಕೆಯಾದ ಬಳಿಕ ಓಟು ಹಾಕಿದವನಿಗೂ, ಓಟು ಹಾಕದವನಿಗೂ ಅವನೇ ಶಾಸಕ, ಸಂಸದನಾಗಿರುತ್ತಾನೆ. ಎಲ್ಲರನ್ನೂ ಆತ ಸಮಾನವಾಗಿ ಪರಿಗಣಿಸಬೇಕು. ಆದರೆ ಬಿಜೆಪಿ ಇಂದು ಮಾಡುತ್ತಿರುವುದೇನು ಎಂದವರು ಪ್ರಶ್ನಿಸಿದರು.

ಯಡಿಯೂರಪ್ಪಗೆ ಮೂರೇ ತಿಂಗಳು: ಈ ಸಲದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏನಾದರೂ (ನನ್ನ ಅಭಿಪ್ರಾಯದಂತೆ ಖಂಡಿತ ಬರುವುದಿಲ್ಲ) ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ಮೂರು ತಿಂಗಳು ಕೂಡಾ ಸಿಎಂ ಆಗಿ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದ ಪ್ರಕಾಶ್ ರೈ, ಕಳೆದ ಬಾರಿ ಮೂವರು ಮುಖ್ಯಮಂತ್ರಿಗಳ ಮೂಲಕ ರಾಜ್ಯದ ಮಾನ ಹರಾಜು ಹಾಕಿದ ಬಿಜೆಪಿಗೆ ಕೇವಲ ಚುನಾವಣೆ ಗೆಲ್ಲಲು ಮಾತ್ರ ಯಡಿಯೂರಪ್ಪರ ಅಗತ್ಯವಿದೆ ಎಂದರು.

ಚುನಾವಣೆಗೆ ಮುನ್ನ ಗಲಭೆಯಾಗಲೂಬಹುದು: ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆ ಜಾಗೃತರಾಗಿರಬೇಕು. ಮಾಧ್ಯಮಗಳಲ್ಲಿ ಆಧುನಿಕ ಚಾಣಕ್ಯ ಎಂದೇ ಬಿಂಬಿತರಾಗುತ್ತಿರುವ ಅಮಿತ್‌ ಶಾ ಯಾವುದೇ ತಂತ್ರದಿಂದಲಾದರೂ ಚುನಾವಣೆ ಗೆಲ್ಲಲು ಪ್ರಯತ್ನಿಸಬಹುದು. ಆದುದರಿಂದ ಚುನಾವಣೆಗೆ ಮುನ್ನ ಗಲಭೆಯಾಗಲೂಬಹುದು ಎಂದರು.
 
ಸಿದ್ದರಾಮಯ್ಯ ಬೆಟರ್: ಬಿಜೆಪಿಯ ಮೂವರು ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಸಿದ್ದರಾಮಯ್ಯ ‘ಉತ್ತಮ ಮುಖ್ಯಮಂತ್ರಿ’ಯಾಗಿದ್ದು ಕಳೆದೆರಡು ವರ್ಷಗಳಿಂದಂತೂ ಅತ್ಯುತ್ತಮ ವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಮಾಧ್ಯಮಗಳಿಗೆ ಮಸಾಲೆ ನೀಡಬೇಡಿ ಎಂದು ತಮ್ಮ ಪಕ್ಷೀಯರಿಗೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ತಾಕೀತನ್ನು ಟೀಕಿಸಿದ ಪ್ರಕಾಶ್ ರೈ, ಅವರಿಗೆ ಮಾತನಾಡಲು ಬಿಡಿ, ಯಾಕೆ ಬಾಯಿ ಮುಚ್ಚಿಸುತ್ತೀರಿ ಎಂದರು.

ಅವರೆಲ್ಲರೂ ಸತ್ಯವನ್ನೇ ಮಾತನಾಡುತಿದ್ದಾರೆ. ಬಿಜೆಪಿಯ ನಿಜವಾದ ಅಜೆಂಡಾ ಏನು ಎನ್ನುವುದು ಇವರ ಮಾತುಗಳಿಂದ ನಮಗೆ ತಿಳಿಯುತ್ತದೆ. ಸಚಿವ ಅನಂತ್ ಕುಮಾರ್ ಹೆಗಡೆ ನಾಲಗೆ ತುದಿಯಲ್ಲಿ ಕೋಮುವಾದವಿದೆ. ಪ್ರತಾಪ್ ಸಿಂಹನಿಗೆ ಸಂಸ್ಕೃತಿಯೇ ಗೊತ್ತಿಲ್ಲ ಎಂದರು.

ನನ್ನ ದೇಶದ ಪ್ರಧಾನಿಯನ್ನು ಪ್ರಶ್ನಿಸುವುದು ತಪ್ಪೇ. ಈ ಅಧಿಕಾರ ನಾನೂ ಸೇರಿದಂತೆ ಎಲ್ಲರಿಗೂ ಇದೆ. ಆದರೆ ಇಲ್ಲಿ ಪ್ರಧಾನಿಗೆ ಪ್ರಶ್ನೆ ಕೇಳಿದರೆ ಭಕ್ತರು ನಿಮ್ಮ ಮೇಲೆ ಮುಗಿ ಬೀಳುತ್ತಾರೆ. ಹಾಗಾದರೆ ಕಲಾವಿದ ರಾಜಕೀಯ ಪ್ರಜ್ಞೆ ಹೊಂದಿದ್ದು ಮಾತನಾಡಬಾರದೇ ಎಂದು ಕೇಳಿದರು.

‘ಜಸ್ಟ್ ಆಸ್ಕಿಂಗ್’ ಮೂಲಕ ನಾನು ಮಾತನಾಡಲು ಆರಂಭಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ನನ್ನ ಹಿಂಬಾಲಕರ ಸಂಖ್ಯೆ ಗಣನೀಯ ಹೆಚ್ಚಳವಾಗಿದೆ. ಎಲ್ಲಾ ದಮನಿತರ ಧ್ವನಿಯಾಗಿ, ಜನಸಾಮಾನ್ಯರ ಆತ್ಮಸಾಕ್ಷಿ ಯಾಗಿ ನನ್ನನ್ನು ಗುರುತಿಸಲಾಗುತ್ತಿದೆ. ನನ್ನ ಟ್ವಿಟರ್ ಹಿಂಬಾಲಕರ ಸಂಖ್ಯೆ 2.5 ಮಿಲಿಯನ್‌ಗೇರಿದರೆ, ಫೇಸ್‌ಬುಕ್‌ನಲ್ಲಿ 45 ಲಕ್ಷ ಮಂದಿ ಇದ್ದಾರೆ ಎಂದರು.

ಚುನಾವಣೆಯ ಬಳಿಕ ಜಸ್ಟ್ ಆಸ್ಕಿಂಗ್ ಹಲವು ಚಟುವಟಿಕೆಗಳನ್ನು ಹಮ್ಮಿ ಕೊಳ್ಳಲು ನಿರ್ಧರಿಸಿದೆ. ಜನರಲ್ಲಿ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆ ಮೂಡಿಸುವ ಕಮ್ಮಟವನ್ನು ನಡೆಸಲಾಗುವುದು. ನನಗೆ ನನ್ನ ಹೋರಾಟದ ಬಗ್ಗೆ ಸ್ಪಷ್ಟ ಕಲ್ಪನೆ ಇದೆ. ಬಿಜೆಪಿಯನ್ನು ನಾನು ಪ್ರಜ್ಞಾಪೂರ್ವಕಾಗಿಯೇ ವಿರೋಧಿ ಸುತ್ತಿದ್ದೇನೆ. ಎಲ್ಲಾ ಪಕ್ಷಗಳನ್ನು ಪ್ರಶ್ನಿಸುತ್ತೇನೆ. ಅದು ಭಾರತೀಯನಾಗಿ ನನ್ನ ಅಧಿಕಾರ ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News