‘ಯೆನೆಪೊಯ’ದಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ಟಾಟಾ ಟ್ರಸ್ಟ್‌ನೊಂದಿಗೆ ಒಡಂಬಡಿಕೆ: ವೈ.ಅಬ್ದುಲ್ಲಾ ಕುಂಞಿ

Update: 2018-04-24 15:30 GMT

ಮಂಗಳೂರು, ಎ.24: ಯೆನೆಪೊಯ ಡೀಮ್ಡ್ ಟು ಬಿ ವಿಶ್ವವಿದ್ಯಾನಿಲಯ ಮತ್ತು ಆಸ್ಪತ್ರೆಯು ಮುಂಬೈಯ ಟಾಟಾ ಟ್ರಸ್ಟ್ ಸಹಯೋಗದೊಂದಿಗೆ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ಒಡಂಬಡಿಕೆ ಮಾಡಿಕೊಂಡಿದೆ. ಶೀಘ್ರದಲ್ಲಿ ಯೆನೆಪೊಯ ಸಂಸ್ಥೆಯಲ್ಲಿ ಕ್ಯಾನ್ಸರ್ ರೋಗ ತಡೆಗೆ ಅತ್ಯುತ್ತಮ ಚಿಕಿತ್ಸಾ ಕೇಂದ್ರ ಕಾರ್ಯಾರಂಭಗೊಳ್ಳಲಿದೆ ಎಂದು ಯೆನೆಪೊಯ ಡೀಮ್ಡ್ ಟು ಬಿ ಯುನಿವರ್ಸಿಟಿಯ ಕುಲಪತಿ ವೈ.ಅಬ್ದುಲ್ಲ ಕುಂಞಿ ತಿಳಿಸಿದ್ದಾರೆ.

ಯೆನೆಪೊಯ ಡೀಮ್ಡ್ ಟು ಬಿ ಯುನಿವರ್ಸಿಟಿಯಲ್ಲಿ ‘ಆರೋಗ್ಯ ವರ್ಧನೆ ಮತ್ತು ಆರಂಭಿಕ ಹಂತದಲ್ಲೇ ರೋಗ ಪತ್ತೆಯೊಂದಿಗೆ ಕ್ಯಾನ್ಸರ್ ರೋಗ ತಡೆ ಮತ್ತು ನಿಯಂತ್ರಣ ’ಎಂಬ ವಿಚಾರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕ್ಯಾನ್ಸರ್ ತಡೆಗಟ್ಟುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ಈ ಸವಾಲನ್ನು ಎದುರಿಸಲು ಸಂಘಟಿತ ಪ್ರಯತ್ನ ಅಗತ್ಯ. ಅದೇರೀತಿ ಯೆನೆಪೊಯ ಸಂಸ್ಥೆಯಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಆರಂಭಿಸಲು ಟಾಟಾ ಟ್ರಸ್ಟ್ ಸಹಕಾರ ನೀಡಲು ಮುಂದಾಗಿದೆ. ಇದರಿಂದ ಕ್ಯಾನ್ಸರ್ ಪೀಡಿತರಿಗೆ ಕನಿಷ್ಠ ದರದಲ್ಲಿ ಸ್ಥಳೀಯವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಕಳೆದ ವರ್ಷ ಉಡುಪಿಯಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ನೆರವಿನೊಂದಿಗೆ ಹಮ್ಮಿಕೊಂಡಿದ್ದ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅಬ್ದುಲ್ಲಾ ಕುಂಞಿ ನುಡಿದರು.

*ಕ್ಯಾನ್ಸರ್ ಚಿಕಿತ್ಸೆಗೆ ಟಾಟಾ ಟ್ರಸ್ಟ್ ಬೆಂಬಲ:
ಮುಂಬೈಯ ಟಾಟಾ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಆರ್.ವೆಂಕಟರಮಣನ್ ಮಾತನಾಡಿ, ಕ್ಯಾನ್ಸರ್ ರೋಗ ತಡೆಗಟ್ಟಲು ಹಾಗೂ ನಿಯಂತ್ರಣಕ್ಕೆ ಯೆನೆಪೊಯ ಡೀಮ್ಡ್ ಟು ಬಿ ವಿವಿ ಹಾಗೂ ಆಸ್ಪತ್ರೆಯ ಮೂಲಕ ನಡೆಯುತ್ತಿರುವ ಜಾಗೃತಿ ಕಾರ್ಯಕ್ರಮ ಉತ್ತಮ ಹೆಜ್ಜೆ ಎಂದು ಶ್ಲಾಘಿಸಿದರು.

ಕ್ಯಾನ್ಸರ್‌ನ್ನು ತಡೆಗಟ್ಟಲು ಮತ್ತು ಗುಣಪಡಿಸಲು ರೋಗವನ್ನು ಶೀಘ್ರವಾಗಿ ಪತ್ತೆ ಮಾಡುವುದು ಮುಖ್ಯ. ಇದಕ್ಕೆ ಅತ್ಯುತ್ತಮ ರೋಗ ಪರೀಕ್ಷಾ ಕೇಂದ್ರದ ಅಗತ್ಯವಿದೆ. ಈ ನಿಟ್ಟಿನಲ್ಲಿ ಯೆನೆಪೊಯ ಸಂಸ್ಥೆಯ ಮೂಲಕ ತೆರೆಯಲಾಗುವ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಕ್ಕೆ ಸಹಕಾರ ನೀಡುವ ಉದ್ದೇಶದಿಂದ ಟಾಟಾ ಟ್ರಸ್ಟ್ ಈ ಒಡಬಂಡಿಕೆ ಮಾಡಿಕೊಂಡಿದೆ ಎಂದರು.

ಯೆನೆಪೊಯ ವಿವಿಯ ಉಪ ಕುಲಪತಿ ಡಾ.ವಿಜಯ ಕುಮಾರ್ ಮಾತನಾಡಿ, ಟಾಟಾ ಟ್ರಸ್ಟ್ ಸರಕಾರಿ ಸಂಸ್ಥೆಗಳೊಂದಿಗೆ ಟಾಟಾ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿದ್ದರೂ ರಾಜ್ಯದಲ್ಲಿ ಖಾಸಗಿ ಸಂಸ್ಥೆಯ ಜತೆ ಮಾಡಿಕೊಂಡಿರುವ ಪ್ರಥಮ ಒಡಂಬಡಿಕೆ ಇದಾಗಿದೆ ಎಂದರು.

ಈ ಒಡಂಬಡಿಕೆಯಿಂದ 120 ಹಾಸಿಗೆಗಳ ಕ್ಯಾನ್ಸರ್‌ಚಿಕಿತ್ಸಾ ಕೇಂದ್ರವು ಯೆನೆಪೊಯ ಸಂಸ್ಥೆಯಲ್ಲಿ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಕೆ.ಭೈರಪ್ಪ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ಯೆನೆಪೊಯ ಡೀಮ್ಡ್ ಟು ಬಿ ವಿವಿ ಕುಲಪತಿ ವೈ.ಅಬ್ದುಲ್ಲಾ ಕುಂಞಿ ಹಾಗೂ ಟಾಟಾ ಟ್ರಸ್ಟ್ ಆಡಳಿತ ಟ್ರಸ್ಟಿ ಆರ್.ವೆಂಕಟರಮಣನ್ ಯೆನೆಪೊಯ ಸಂಸ್ಥೆಯಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ತೆರೆಯುವ ಒಡಂಬಡಿಕೆಗೆ ಸಹಿ ಹಾಕಿ ದಾಖಲೆಯನ್ನು ಹಸ್ತಾಂತರಿಸಿದರು.

ಕ್ಯಾನ್ಸರ್ ಜಾಗೃತಿಗಾಗಿ ಸಹಕಾರ ನೀಡಿದ ಎನ್ನೆಸ್ಸೆಸ್ ಅಧಿಕಾರಿ ವಿನೀತಾ ರೈ, ಉಡುಪಿ ಜಿಲ್ಲಾ ರೋಗ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ್, ಇಂಡಿಯನ್ ಆಯಿಲ್ ಕಾರ್ಪೊರೇಶನ್ ಪ್ರತಿನಿಧಿ ವರದಾಚಾರಿ, ಉದ್ಯಮಿ ಆನಂದ ಕುಮಾರ್, ಉಡುಪಿಯ ಹಿಂದಿನ ಜಿಲ್ಲಾಧಿಕಾರಿ ಸದ್ಯ ಬೆಂಗಳೂರು ಪೌರಾಡಳಿತ ಇಲಾಖೆಯ ನಿರ್ದೇಶಕರಾಗಿರುವ ಡಾ.ವಿಶಾಲ್‌ರನ್ನು ಯೆನೆಪೊಯ ಅಬ್ದುಲ್ಲಾ ಕುಂಞ ಗೌರವಿಸಿದರು.

ಇದೆ ಸಂದರ್ಭದಲ್ಲಿ ಕ್ಯಾನ್ಸರ್ ಜಾಗೃತಿ ಮೂಡಿಸುವ ಸಂದೇಶ ಸಾರುವ ಸಿಡಿಯನ್ನು ಮುಂಬೈಯ ಟಾಟಾ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಆರ್.ವೆಂಕಟರಮಣನ್ ಬಿಡುಗಡೆಗೊಳಿಸಿದರು.

ಯೆನೆಪೊಯ (ಡೀಮ್ಡ್ ಟು ಬಿ)ವಿವಿ ಕುಲಸಚಿವ ಡಾ.ಶ್ರೀ ಕುಮಾರ್ ಮೆನನ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ.ಅಭಯ ಎಸ್. ನೀರ್ಗುಡೆ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಡಾ.ವರುಣ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News