ಬಿಜೆಪಿಯ ‘ನಮ್ಮ ಮನೆ ಬಿಜೆಪಿ ಮನೆ’ ಅಭಿಯಾನಕ್ಕೆ ಕಾಂಗ್ರೆಸ್ ವಿರೋಧ

Update: 2018-04-24 16:14 GMT

ಮಂಗಳೂರು, ಎ.24: ಬಿಜೆಪಿಯು ಎ.25ರಂದು ರಾಜ್ಯಾದ್ಯಂತ ಹಮ್ಮಿಕೊಂಡಿರುವ ‘ನಮ್ಮ ಮನೆ ಬಿಜೆಪಿ ಮನೆ’ ಅಭಿಯಾನವು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಚುನಾವಣಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮನೆಯ ಮೇಲಿನ ಬಿಜೆಪಿ ಧ್ವಜವನ್ನು ಚುನಾವಣಾ ಆಯೋಗ ತೆರವುಗೊಳಿಸಿದ್ದರಿಂದ ಅಸಮಾಧಾನಗೊಂಡ ಬಿಜೆಪಿಯು ಎ.25ರಂದು ರಾಜ್ಯಾದ್ಯಂತ ‘ನಮ್ಮ ಮನೆ ಬಿಜೆಪಿ ಮನೆ’ ಅಭಿಯಾನ ಹಮ್ಮಿಕೊಂಡಿದೆ. ಅಂದು ಮನೆಯ ಮೇಲೆ ಬಿಜೆಪಿಯ ಧ್ವಜ ಹಾರಿಸುವ ಸಾಧ್ಯತೆ ಇದೆ. ಹಾಗಾಗಿ ಚುನಾವಣಾ ಆಯೋಗ ಹದ್ದಿನ ಕಣ್ಣಿಡಬೇಕು ಎಂದರು.

ಈಗಾಗಲೆ ಈ ಘೋಷಣೆಯ ಭಾಗವಾಗಿ ಕೆಲವು ಮನೆಗಳ ಮುಂದೆ ಭಿತ್ತಿಪತ್ರ ಅಂಟಿಸಲಾಗಿದೆ. ಇದನ್ನು ಕೂಡ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕಿದೆ. ಅಧಿಕಾರಿಗಳು ಇಂತಹ ಪ್ರಕ್ರಿಯೆಯನ್ನು ನಿರ್ಲಕ್ಷಿಸಬಾರದು ಎಂದು ಐವನ್ ಡಿಸೋಜ ಹೇಳಿದರು.

ಮಕ್ಕಳ ಅತ್ಯಾಚಾರ ತಡೆಯಲು ಮೋದಿ ಸರಕಾರ ಹೊಸ ಕಾಯ್ದೆ ಜಾರಿಗೊಳಿಸಿದೆ. ಆದರೆ, ಕಾಂಗ್ರೆಸ್ ಏನನ್ನೂ ಮಾಡಿಲ್ಲ ಎಂದು ತಿಳಿಸುವ ಜಾಹೀರಾತು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಜಾಹೀರಾತು ಬಿಜೆಪಿಗರಿಗೆ ಅನ್ವಯವಾಗುತ್ತದೆ. ಯಾಕೆಂದರೆ ಈ ವಿಷಯದಲ್ಲಿ ಬಿಜೆಪಿಗರೇ ಮೊದಲ ಸ್ಥಾನದಲ್ಲಿದ್ದಾರೆ ಎಂದು ಅವರು ನುಡಿದರು.

ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಾಜ್ಯ ಸರಕಾರವು ಅಸ್ತಿತ್ವಕ್ಕೆ ಬಂದ ತಕ್ಷಣ ಎಂ.ಸಿ.ನಾಣಯ್ಯ ನೇತೃತ್ವದಲ್ಲಿ ಎಲ್ಲ ಪಕ್ಷಗಳ ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿತ್ತು. ಮೂರು ವರ್ಷಗಳಲ್ಲಿ ಈ ಸಮಿತಿಯು ಅಧ್ಯಯನ ನಡೆಸಿ ವರದಿಯನ್ನೂ ನೀಡಿತ್ತು. ಆದರೆ, ಬಿಜೆಪಿ ಅಸ್ತಿತ್ವದಲ್ಲಿರುವ ದೇಶದ 22 ರಾಜ್ಯಗಳಲ್ಲೂ ಇಂತಹ ಸಮಿತಿ ರಚಿಸಿದ ಉದಾಹರಣೆ ಇಲ್ಲ ಎಂದು ಐವನ್ ನುಡಿದರು.

12 ವರ್ಷದೊಳಗಿನ ಹೆಣ್ಮಕ್ಕಳ ಮೇಲಿನ ಅತ್ಯಾಚಾರ ಆರೋಪಿಗಳಿಗೆ ಮಾತ್ರ ಶಿಕ್ಷೆ ವಿಧಿಸಿದರೆ ಅದಕ್ಕಿಂತ ಮೇಲಿನ ಹೆಣ್ಮಕ್ಕಳ ಮೇಲೆ ಇಂತಹ ಹೇಯ ಕೃತ್ಯ ನಡೆಸಿದರೆ ಅವರಿಗೆ ನ್ಯಾಯ ಇಲ್ಲವೇ? ಎಂದು ಪ್ರಶ್ನಿಸಿದ ಐವನ್ ಡಿಸೋಜ ಈ ಕಾನೂನು ಸಮರ್ಪಕವಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಮೇಯರ್ ಭಾಸ್ಕರ ಮೊಯ್ಲಿ, ಪಕ್ಷದ ಮುಖಂಡರಾದ ಬಿ.ಎಚ್.ಖಾದರ್, ಇಬ್ರಾಹೀಂ ಕೋಡಿಜಾಲ್, ಮಮತಾ ಗಟ್ಟಿ, ಧನಂಜಯ ಅಡ್ಪಂಗಾಯ, ಮಾಜಿ ಮೇಯರ್‌ಗಳಾದ ಹರಿನಾಥ್, ಶಶಿಧರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News