ಪೊಲೀಸರ ಮುಂದೆ ಅಸೀಮಾನಂದರ ತಪ್ಪೊಪ್ಪಿಗೆ ಸ್ವಪ್ರೇರಿತವಾಗಿರಲಿಲ್ಲ: ಕೋರ್ಟ್

Update: 2018-04-24 16:33 GMT

ಹೈದರಾಬಾದ್,ಎ.24: ಯ ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಖುಲಾಸೆಗೊಳಿಸಿರುವ ಎನ್‌ಐಎ ವಿಶೇಷ ನ್ಯಾಯಾಲಯವು, ಸ್ವಾಮಿ ಅಸೀಮಾನಂದ ಪೊಲೀಸರ ಮುಂದೆ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆ ಸ್ವಪ್ರೇರಿತವಾಗಿರಲಿಲ್ಲ ಎನ್ನುವುದನ್ನು ತನ್ನ ತೀರ್ಪಿನಲ್ಲಿ ಎತ್ತಿಹಿಡಿದಿದೆ. ಅಸೀಮಾನಂದ ನಾಲ್ಕು ತಿಂಗಳ ಬಳಿಕ ಈ ಹೇಳಿಕೆಯನ್ನು ಹಿಂದೆಗೆದುಕೊಂಡಿದ್ದರು.

ಆರೋಪಿಗಳ ಪೈಕಿ ಓರ್ವನಾಗಿದ್ದ ಬಿಹಾರದ ಆರೆಸ್ಸೆಸ್ ಪ್ರಚಾರಕ ದೇವೇಂದ್ರ ಗುಪ್ತಾನನ್ನು ಪ್ರಸ್ತಾಪಿಸಿರುವ ನ್ಯಾಯಾಲಯವು,ಆರೆಸ್ಸೆಸ್ ನಿಷೇಧಿತ ಸಂಘಟನೆಯಲ್ಲ ಮತ್ತು ಅದರೊಂದಿಗೆ ನಂಟು ಹೊಂದಿದ್ದಾನೆ ಎಂಬ ಮಾತ್ರಕ್ಕೆ ವ್ಯಕ್ತಿಯನ್ನು ಕೋಮುವಾದಿ ಅಥವಾ ಸಮಾಜ ವಿರೋಧಿ ಎಂದು ಪರಿಗಣಿಸು ವಂತಿಲ್ಲ ಎಂದೂ ಹೇಳಿದೆ.

 ಅಸೀಮಾನಂದ ಇಲ್ಲಿಯ ಚಂಚಲಗುಡಾ ಜೈಲಿನಲ್ಲಿ ಕೈದಿಯಾಗಿದ್ದಾಗ ಇತರ ಇಬ್ಬರು ಕೈದಿಗಳಾಗಿದ್ದ ಮಕ್ಬೂಲ್ ಬಿನ್ ಅಲಿ ಅಲಿಯಾಸ್ ಚವಾಯಿಷ್ ಮತ್ತು ಶೇಖ್ ಅಬ್ದುಲ್ ಖಲೀಂ ಅವರ ಬಳಿ ತನ್ನ ತಪ್ಪು ಒಪ್ಪಿಕೊಂಡಿದ್ದರು ಎಂಬ ಪ್ರಾಸಿಕ್ಯೂಷನ್ ವಾದವನ್ನೂ ತಳ್ಳಿಹಾಕಿರುವ ನ್ಯಾಯಾಲಯವು,ಅಸೀಮಾನಂದ ಜೈಲಿನಲ್ಲಿದ್ದ ಸಮಯ ಈ ಕೈದಿಗಳೂ ಜೈಲಿನಲ್ಲಿ ಇದ್ದರು ಎನ್ನುವುದಕ್ಕೆ ಎರಡು ಮೌಖಿಕ ಸಾಕ್ಷಗಳನ್ನು ಹೊರತುಪಡಿಸಿದರೆ ಯಾವುದೇ ದಾಖಲೆ ರೂಪದ ಸಾಕ್ಷಾಧಾರಗಳಿಲ್ಲ ಎನ್ನುವುದನ್ನು ಬೆಟ್ಟುಮಾಡಿದೆ.

 ಅಸೀಮಾನಂದರ ತಪ್ಪೊಪ್ಪಿಗೆ ಹೇಳಿಕೆಯು ಭಾರತೀಯ ಸಾಕ್ಷ ಕಾಯ್ದೆಯ ಕಲಂ 16ಕ್ಕೆ ವ್ಯತಿರಿಕ್ತವಾಗಿದೆ ಮತ್ತು ಇದು ಅವರು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಪಡೆದುಕೊಂಡಿದ್ದ ಹೇಳಿಕೆಯಾಗಿದ್ದು ಸ್ವಯಂಪ್ರೇರಿತವಾಗಿರಲಿಲ್ಲ ಎಂದು ವಿಶೇಷ ನ್ಯಾಯಾಧೀಶ ಕೆ.ರವೀಂಂದ್ರ ರೆಡ್ಡಿ ಅವರು ತನ್ನ ಎ.16ರ ತೀರ್ಪಿನಲ್ಲಿ ಹೇಳಿದ್ದಾರೆ.

ಆರೋಪಿಗಳ ವಿರುದ್ಧದ ಆರೋಪಗಳ ಪೈಕಿ ಕನಿಷ್ಠ ಒಂದನ್ನಾದರೂ ರುಜುವಾತುಗೊಳಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲಗೊಂಡಿದೆ ಎಂದು ನ್ಯಾಯಾಲಯವು ಎಲ್ಲ ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ತನ್ನ ತೀರ್ಪಿನಲ್ಲಿ ಬೆಟ್ಟು ಮಾಡಿದೆ.

2007,ಮೇ 18ರಂದು ನಾಲ್ಕು ಶತಮಾನಗಳಿಗೂ ಹಳೆಯದಾದ ಮಕ್ಕಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ವೇಳೆ ಸಂಭವಿಸಿದ್ದ ಪ್ರಬಲ ಸ್ಫೋಟದಲ್ಲಿ ಒಂಭತ್ತು ಜನರು ಸಾವನ್ನಪ್ಪಿದ್ದು,ಇತರ 58 ಜನರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News