ಅಲ್ಪಸಂಖ್ಯಾತರನ್ನು ತುಳಿಯುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ: ಪ್ರಕಾಶ್ ರೈ

Update: 2018-04-24 16:59 GMT

ಉಡುಪಿ, ಎ.24: ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ತುಳಿಯುವ ಪ್ರಯತ್ನ ಬಹಳ ವ್ಯವಸ್ಥಿತವಾಗಿ ನಡೆಯುತ್ತಿದೆ. ಸಜ್ಜನರ ಊಹೆಗೂ ನಿಲುಕದ ದ್ರೋಹದ ಪಿತೂರಿಗಳು ನಡೆಯುತ್ತಿವೆ. ಈ ರೀತಿ ದ್ರೋಹ ಮಾಡುವವರು ಇಂದು ದೊಡ್ಡ ಮನುಷ್ಯರಾಗಿದ್ದಾರೆ. ಸಂವಿಧಾನ ರಚನೆ ಮಾಡಿದ ಅಂಬೇಡ್ಕರ್ ಮೂರ್ತಿಯನ್ನು ಇಂದು ಕಾರಾಗೃಹದಲ್ಲಿರುವಂತೆ ಬಂಧಿಯಾಗಿ ಇಡಲಾಗಿದೆ ಎಂದು ಪ್ರಗತಿಪರ ಚಿಂತಕ, ಖ್ಯಾತ ಚಿತ್ರನಟ ಪ್ರಕಾಶ್ ರೈ ಟೀಕಿಸಿದ್ದಾರೆ.

 ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ, ಕೋಮು ಸೌಹಾರ್ದ ವೇದಿಕೆ ಹಾಗೂ ಅಲ್ಪಸಂಖ್ಯಾತ ಮುಸ್ಲಿಮ್, ಕ್ರೈಸ್ತ ಸಂಘಟನೆಗಳ ಸಹಭಾಗಿತ್ವದಲ್ಲಿಅಜ್ಜರಕಾಡಿನ ಭುಜಂಗ ಪಾರ್ಕಿನ ಬಯಲು ರಂಗಮಂಟಪದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆಯ ಪ್ರಯುಕ್ತ ಮಂಗಳವಾರ ಆಯೋಜಿಸಲಾಗಿದ್ದ ‘ಸಂವಿಧಾನ ರಕ್ಷಿಸಿ, ದೇಶ ಉಳಿಸಿ’ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಧರ್ಮ ಬೆಳೆಸಲು ಮಠ ನಿರ್ಮಿಸಿ, ಸರಕಾರ ಮಾಡಬೇಡಿ: ಧರ್ಮ, ಸಿದ್ಧಾಂತ ಬೆಳೆಸಲು ಸರಕಾರ ಮಾಡಬೇಡಿ. ಅದಕ್ಕಾಗಿ ಮಠ ಮಂದಿರಗಳನ್ನು ನಿರ್ಮಿಸಿಕೊಳ್ಳಿ. ಧರ್ಮವನ್ನು ಹೇರುವುದು ಸರಕಾರದ ಕೆಲಸ ಅಲ್ಲ. ಧರ್ಮದ ಹೆಸರಿನಲ್ಲಿ ರಾಜಕಾರಣ ತಪ್ಪು ಎಂದು ಪ್ರಕಾಶ್ ರೈ ನುಡಿದರು.

ರಾಜಕೀಯಕ್ಕೆ ಷಾ ಅನರ್ಹ: ದೇಶದ ರಾಜಕಾರಣದಲ್ಲಿ ಅಮಿತ್ ಷಾಗೆ ಒಬ್ಬ ನಾಯಕನಾಗುವ ಯಾವ ಅರ್ಹತೆಯೂ ಇಲ್ಲ. ಎಂಎಲ್‌ಎಗಳನ್ನು ಖರೀದಿಸಿ ಆಡಳಿತ ನಡೆಸುವ ಕುಖ್ಯಾತಿ ಅಮಿತ್ ಷಾ ಅವರಲ್ಲಿದೆಯೇ ಹೊರತು ಗಾಂಧಿ, ಅಂಬೇಡ್ಕರ್‌ರಂತೆ ಈ ದೇಶ ಪ್ರಗತಿ ಪಥದಲ್ಲಿ ಸಾಗುವಂತಹ ಯೋಚನೆಗಳು ಇಲ್ಲ. ಚುನಾವಣೆ ಗೆಲ್ಲುವುದರಲ್ಲಿ ಮತ್ತು ಅದಕ್ಕೆ ದಾಳ ಹಾಕುವುದರಲ್ಲಿ ಇವರು ನಿಸ್ಸೀಮ. ಈ ರೀತಿಯ ಪ್ರತಿಭೆ ಇರುವವರು ನಮ್ಮ ದೇಶಕ್ಕೆ ಬೇಕೇ ಎಂದು ಪ್ರಕಾಶ್ ರೈ ಪ್ರಶ್ನಿಸಿದರು.

ರಾಜ್ಯದ ಬಿಜೆಪಿ ನಾಯಕರಿಗೆ ಅಮಿತ್ ಷಾ ವೇದವಾಕ್ಯ. ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಅಮಿತ್ ಷಾ ಆಳುತ್ತಾರೆಯೇ ಅಥವಾ ಬಿಜೆಪಿ ನಾಯಕರುಗಳೇ. ಕನ್ನಡಿಗರ ಸ್ವಾಭಿಮಾನ ಎಲ್ಲಿ ಹೋಗಿದೆ. ಇವರ ಈ ರೀತಿಯ ಕುಟೀಲ ರಾಜಕೀಯವನ್ನು ಪ್ರಶ್ನಿಸುವವರನ್ನು ಹಿಂದು ಧರ್ಮದ ವಿರೋಧಿಗಳೆಂದು ಬಣ್ಣಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕೋಮುವಾದ ಎಂಬುದು ಅಮಿತ್ ಷಾ, ಅನಂತ್ ಕುಮಾರ್ ಹೆಗಡೆಯ ನಾಲಿಗೆಯ ತುದಿಯಲ್ಲಿ ಇದೆ. ದೇಶದಲ್ಲಿ ಅಶಾಂತಿ ಹುಟ್ಟಿಸಿ, ಜನರ ಮಧ್ಯೆ ದ್ವೇಷ ಮೂಡಿಸಿ ಗೆಲ್ಲಲು ನೋಡುವ, ಸಂವಿಧಾನ ಬದಲಾಯಿಸುವ, ಒಂದು ಕೋಮುವನ್ನು ಅಳಿಸಿ ಹಾಕುವ, ಅತ್ಯಾಚಾರ ಮಾಡುವವರನ್ನು ಕಾಪಾಡುವಂತವರ ಕೈಯಲ್ಲಿ ಹೇಗೆ ದೇಶ ಕೊಡುವುದು. ಬಿಜೆಪಿ ಅಧಿಕಾರಕ್ಕೆ ಬಂದರೆ ಈ ದೇಶದಲ್ಲಿ ದೊಡ್ಡ ದುರಂತ ನೋಡಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸಮಾವೇಶವನ್ನು ಉದ್ಘಾಟಿಸಿದ ದಸಂಸ(ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ್ ಮಾತನಾಡಿ, ಅಂಬೇಡ್ಕರ್ ರಚಿಸಿ ರುವ ಸಂವಿಧಾನವನ್ನು ಅಳಿಸಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಸಂಸತ್ತಿನ ಮೇಲೆ ಧರ್ಮ ಸಂಸತ್ತಿನ ಹೆಸರಿನಲ್ಲಿ ಸಾಧು ಸಂತರು ದಾಳಿಗಳನ್ನು ಮಾಡುತ್ತಿ ದ್ದಾರೆ. ದೇಶ ಹಾಗೂ ಧರ್ಮಕ್ಕೆ ಆಪತ್ತು ಬಂದಿರುವುದು ಇಲ್ಲಿನ ಜನತೆಯಿಂದ ಅಲ್ಲ, ಇಂತಹ ಸಾಧು ಸಂತರಿಂದಲೇ. ಹೀಗಾಗಿ ಭಾರತದ ಹೊಸ ಚರಿತ್ರೆ ನಿರ್ಮಾಣ ಆಗಬೇಕು. ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗೆ ಕಂಕಣ ಬದ್ಧರಾಗಬೇಕು ಎಂದರು.

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಕ್ರೈಸ್ತ ಧರ್ಮ ಗುರು ರೆ.ಫಾ.ವಿಲಿಯಂ ಮಾರ್ಟಿಸ್ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಗೌರಿ ಲಂಕೇಶ್ ಸ್ಮರಣಾರ್ಥ ಆರಂಭಿಸಿರುವ ‘ನಾನು ಗೌರಿ’ ಪತ್ರಿಕೆಯ ಮೊದಲ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕಲಾ ವಿದ ಅಮ್ಮ ರಾಮಚಂದ್ರ ಅಂಬೇಡ್ಕರ್ ಹಾಗೂ ಬುದ್ಧ ಗೀತೆಯನ್ನು ಹಾಡಿ ದರು. ಸುಂದರ್ ಮಾಸ್ತರ್, ಶ್ಯಾಮ್‌ರಾಜ್ ಬಿರ್ತಿ, ಬೊಗ್ರ ಕೊರಗ, ವಲೇ ರಿಯನ್ ಫೆರ್ನಾಂಡಿಸ್, ಶ್ಯಾಮ್‌ಸುಂದರ್ ತೆಕ್ಕಟ್ಟೆ, ಚಂದ್ರ ಅಲ್ತಾರ್ ಮೊದಲಾದವರು ಉಪಸ್ಥಿತರಿದ್ದರು.

ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಫಣಿರಾಜ್ ಹಾಗೂ ಎಸ್.ಎಸ್. ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಸಮಾವೇಶಕ್ಕೆ ಮೊದಲು ಉಡುಪಿ ಬೋರ್ಡ್ ಹೈಸ್ಕೂಲಿನಿಂದ ಹೊರಟ ಮೆರವಣಿಗೆ ಕೆ.ಎಂ.ಮಾರ್ಗವಾಗಿ ಹಳೆ ಪೋಸ್ಟ್ ಆಫೀಸ್ ಜೋಡುರಸ್ತೆ ಮೂಲಕ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಸಮಾಪ್ತಿಗೊಂಡಿತು.


ಖಾವಿ ತೊಟ್ಟ ವಿಕಾರಾನಂದರು

ಹಿಂದು ಧರ್ಮ ಬೇರೆ, ಹಿಂದುತ್ವ ಬೇರೆ. ನನಗೆ ಖಾವಿ ಬಹಳ ಇಷ್ಟ. ಯಾಕೆ ಅಂದರೆ ಅದನ್ನು ವಿವೇಕಾನಂದರು ತೊಡುತ್ತಿದ್ದರು. ಆದರೆ ಇವರು ಈಗ ಖಾವಿ ತೊಟ್ಟ ವಿವೇಕಾನಂದರಲ್ಲ, ವಿಕಾರಾನಂದರು. ಖಾವಿಯ ಹಿಂದೆ ಇರುವ ಇವರ ಬಣ್ಣ ಬೇರೆ. ಹಿಂದು ಮುಗ್ಧ ಮನಸ್ಸಿನ ಮೇಲೆ ಅವರ ವಿಕಾರಗಳನ್ನು ಹೇರಲಾಗುತ್ತಿದೆ. ಧರ್ಮ ಇರುವುದು ಬೆಂಕಿ ಹಚ್ಚಲು ಅಲ್ಲ, ದೀಪ ಬೆಳಗಿಸಲು ಎಂದು ಪ್ರಕಾಶ್ ರೈ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News