ಸತ್ತವರಿಗೂ ಸಹ ಘನತೆ ಇದೆ:ಸುಪ್ರೀಂ

Update: 2018-04-24 16:53 GMT

ಹೊಸದಿಲ್ಲಿ,ಎ.24: ‘‘ಸತ್ತವರಿಗೂ ಸಹ ಘನತೆ ಎನ್ನುವುದಿದೆ. ಅವರನ್ನು ಹೆಸರಿಸುವುದು ಅಥವಾ ಅವಮಾನಿಸುವುದು ಸಲ್ಲದು’’ ಅತ್ಯಾಚಾರ ಮತ್ತು ಹತ್ಯೆಗೆ ಗುರಿಯಾದ ಕಥುವಾ ಬಾಲಕಿ ಸೇರಿದಂತೆ ಅತ್ಯಾಚಾರ ಬಲಿಪಶುಗಳ ಗುರುತು ಬಹಿರಂಗ ಕುರಿತು ವಿಷಯವನ್ನು ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು ಹೇಳಿದ್ದು ಹೀಗೆ.

ಅತ್ಯಾಚಾರ ಪ್ರಕರಣಗಳ ಬಲಿಪಶುಗಳು ಬದುಕಿರುವ ಮತ್ತು ಅಪ್ರಾಪ್ತ ವಯಸ್ಕರು ಹಾಗೂ ಮಾನಸಿಕ ಅಸ್ವಸ್ಥರಾಗಿರುವ ಪ್ರಕರಣಗಳಲ್ಲಿಯೂ ಅವರ ಗುರುತುಗಳನ್ನು ಬಹಿರಂಗಗೊಳಿಸಕೂಡದು. ಏಕೆಂದರೆ ಅವರಿಗೆ ಖಾಸಗಿತನದ ಹಕ್ಕು ಇದೆ ಮತ್ತು ಅವರು ಜೀವನದುದ್ದಕ್ಕೂ ಇಂತಹ ಕಳಂಕವನ್ನು ಹೊತ್ತುಕೊಂಡು ಬಾಳಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಮೂರ್ತಿಗಳಾದ ಮದನ ಬಿ.ಲೋಕೂರ್ ಮತ್ತು ದೀಪಕ್ ಗುಪ್ತಾ ಅವರ ಪೀಠವು,ಸತ್ತವರ ಘನತೆಯ ಬಗ್ಗೆಯೂ ಆಲೋಚಿಸಿ. ಅವರನ್ನು ಹೆಸರಿಸದೆ ಅಥವಾ ಅವಮಾನಿಸದೆಯೂ ಮಾಧ್ಯಮಗಳು ವರದಿ ಮಾಡಬಹುದು. ಮೃತರಿಗೂ ಘನತೆಯಿದೆ ಎಂದು ಹೇಳಿತು. ಲೈಂಗಿಕ ಅಪರಾಧಗಳ ಬಲಿಪಶುಗಳ ಗುರುತು ಬಹಿರಂಗಕ್ಕೆ ಸಂಬಂಧಿಸಿದ ಐಪಿಸಿಯ ಕಲಂ 228-ಎ ಅನ್ನು ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರು ಪ್ರಸ್ತಾಪಿಸಿದಾಗ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

228-ಎ ಕಲಮ್‌ಗೆ ಸಂಬಂಧಿಸಿದ ಅಂಶಗಳನ್ನು ಪರಿಶೀಲಿಸಲು ಒಪ್ಪಿಕೊಂಡ ಪೀಠವು,ಅಪ್ರಾಪ್ತ ವಯಸ್ಕ ಬಲಿಪಶುವಿನ ಹೆತ್ತವರ ಒಪ್ಪಿಗೆಯನ್ನು ಪಡೆದುಕೊಂಡ ಮಾತ್ರಕ್ಕೆ ಆಕೆಯ ಗುರುತನ್ನು ಬಹಿರಂಗಗೊಳಿಸಲು ಹೇಗೆ ಸಾಧ್ಯ ಎಂದೂ ಪ್ರಶ್ನಿಸಿತು. ಇದು ನಡೆಯಕೂಡದು ಎಂದು ಅದು ಖಂಡಿತ ಧ್ವನಿಯಲ್ಲಿ ಹೇಳಿತು.

ಸಂತ್ರಸ್ತೆ ಮಾನಸಿಕ ಅಸ್ವಸ್ಥಳಾಗಿದ್ದರೂ ಅವಳಿಗೂ ಖಾಸಗಿತನದ ಹಕ್ಕು ಇದೆ. ಬಾಲಕಿ ಬೆಳೆದು ವಯಸ್ಕಳಾಗುತ್ತಾಳೆ.ಅವರ ಬದುಕಿನಲ್ಲಿ ಈ ಕಳಂಕವೇಕಿರಬೇಕೇ ಎಂದು ಅದು ಪ್ರಶ್ನಿಸಿತು.

ನ್ಯಾಯಾಲಯಕ್ಕೆ ಸಲಹೆಗಾರರಾಗಿ ಅಮಿಕಸ್ ಕ್ಯೂರಿ ಪಾತ್ರವನ್ನು ನಿರ್ವಹಿಸುತ್ತಿರುವ ಜೈಸಿಂಗ್,ಐಪಿಸಿಯ ಕಲಂ 228-ಎ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟನೆಯನ್ನು ನೀಡುವ ಅಗತ್ಯವಿದೆ. ಇಂತಹ ಘಟನೆಗಳನ್ನು ವರದಿ ಮಾಡುವ ಮಾಧ್ಯಮಗಳ ಮೇಲೆ ಸಾರಾಸಗಟು ನಿಷೇಧ ಹೇರಲಾಗದು, ಸರ್ವೋಚ್ಚ ನ್ಯಾಯಾಲಯವು ಪತ್ರಿಕಾ ಸ್ವಾತಂತ್ರ ಮತ್ತು ಬಲಿಪಶುಗಳ ಹಕ್ಕುಗಳ ನಡುವೆ ಸಮತೋಲನವನ್ನು ಹೊಂದಬೇಕಾಗಿದೆ ಎಂದು ಹೇಳಿದರು.

ಅತ್ಯಾಚಾರ ಬಲಿಪಶುಗಳು ಮೃತಪಟ್ಟ ಪ್ರಕರಣಗಳಲ್ಲಿಯೂ ಅವರ ಹೆಸರುಗಳನ್ನೇಕೆ ಬಹಿರಂಗಗೊಳಿಸಬೇಕು ಎಂದೂ ಪೀಠವು ವಿಚಾರಣೆ ವೇಳೆ ಪ್ರಶ್ನಿಸಿತು.

2012,ಡಿ.16ರಂದು ದಿಲ್ಲಿಯಲ್ಲಿ ನಡೆದಿದ್ದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಬರ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯ ಕುರಿತು ಕಳವಳಗಳನ್ನು ವ್ಯಕ್ತಪಡಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News