ತನ್ನ ನಿರ್ಧಾರದ ಬಗ್ಗೆ ವೆಂಕಯ್ಯ ನಾಯ್ಡು ಹೇಳಿದ್ದೇನು ?

Update: 2018-04-24 16:59 GMT

ಹೊಸದಿಲ್ಲಿ, ಎ.24: ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾರ ವಿರುದ್ಧ ಸಲ್ಲಿಸಲಾದ ದೋಷಾರೋಪಣೆ ಸೂಚನೆಯನ್ನು ತಿರಸ್ಕರಿಸಿರುವ ತನ್ನ ನಿರ್ಧಾರ ಸಕಾಲಿಕವಾಗಿದ್ದು ಆತುರದಿಂದ ಕೈಗೊಂಡ ನಿರ್ಧಾರವಲ್ಲ . ಒಂದು ತಿಂಗಳಿಗೂ ಅಧಿಕ ಅವಧಿಯ ಕಾರ್ಯತತ್ಪರತೆಯ ಬಳಿಕ ಕೈಗೊಂಡ ನಿರ್ಧಾರವಿದು ಎಂದು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿದೆ ಆದರೆ ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ. ತನ್ನಿಂದ ನಿರೀಕ್ಷಿಸಲಾಗಿರುವ ಕಾರ್ಯವನ್ನು ಸಾಧ್ಯವಿದ್ದಷ್ಟು ಉತ್ತಮ ರೀತಿಯಲ್ಲಿ ನಿರ್ವಹಿಸಿದ್ದೇನೆ ಎಂದು ನಾಯ್ಡು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ತಾನು ನಿರ್ವಹಿಸಿದ ಕಾರ್ಯದ ಬಗ್ಗೆ ತೃಪ್ತಿಯಿದೆ. ರಾಜ್ಯಸಭೆಯ ಅಧ್ಯಕ್ಷರ ಕಚೇರಿ ಕೇವಲ ಅಂಚೆಕಚೇರಿಯಲ್ಲ. ಇದು ಸಾಂವಿಧಾನಿಕ ಕಾರ್ಯ ನಡೆಸುವ ಕಚೇರಿಯಾಗಿದೆ. ತಾನು ಸಂವಿಧಾನದ ಅಂಶಗಳಿಗೆ ಅನುಸಾರವಾಗಿ ಹಾಗೂ 1968ರ ನ್ಯಾಯಾಧೀಶರ ತನಿಖೆ ಕಾಯ್ದೆಯ ಅನುಸಾರ ಕಾರ್ಯನಿರ್ವಹಿಸಿದ್ದೇನೆ ಎಂದು ನಾಯ್ಡು ಹೇಳಿದರು. ದೋಷಾರೋಪಣೆ ಸೂಚನೆ ತಿರಸ್ಕರಿಸಿದ ನಿರ್ಧಾರದ ಬಗ್ಗೆ ತನ್ನನ್ನು ಭೇಟಿಯಾಗಿ ಅಭಿನಂದಿಸಿದ ಸುಪ್ರೀಂಕೋರ್ಟ್‌ನ 10 ನ್ಯಾಯಾಧೀಶರ ತಂಡದೊಂದಿಗೆ ಮಾತನಾಡಿದ ನಾಯ್ಡು ಈ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ. ಸಿಐಜೆ ದೇಶದ ಅತ್ಯುನ್ನತ ನ್ಯಾಯಾಂಗ ಅಧಿಕಾರಿಯಾಗಿದ್ದು, ಅವರ ಕುರಿತು ಇರುವ ಯಾವುದಾದರೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಆರಂಭಿಕ ಹಂತದಲ್ಲೇ ಬಗೆಹರಿಸಿಕೊಳ್ಳಬೇಕು ಎಂದು ನಾಯ್ಡು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News