ಮಹಿಳಾ ದೌರ್ಜನ್ಯ ಇದೇ ರೀತಿ ಮುಂದುವರಿದರೆ ಪುರುಷ ಭ್ರೂಣ ಹತ್ಯೆ ಆಗಬಹುದು: ವೈದೇಹಿ ಕಳವಳ

Update: 2018-04-24 17:02 GMT

ಉಡುಪಿ, ಎ.21: ಹೆಣ್ಣಿನ ಮೇಲಿನ ದೌರ್ಜನ್ಯ ಇದೇ ರೀತಿ ಮುಂದುವರಿದರೆ ಮುಂದೆ ಹೆಣ್ಣು ಭ್ರೂಣ ಹತ್ಯೆಯಲ್ಲ, ಪುರುಷ ಭ್ರೂಣ ಹತ್ಯೆ ಆಗಬಹುದು. ಇಂದು ಅದಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದನ್ನು ಈಗಲೇ ತಡೆಯುವ ಕೆಲಸ ಮಾಡಿ. ಹೆಣ್ಣು, ಗಂಡು ಭ್ರೂಣ ಹತ್ಯೆ ಇಲ್ಲದ ಸುಂದರ ಸಮಾಜ ನಿರ್ಮಿಸಬೇಕು ಎಂದು ಸಾಹಿತಿ ವೈದೇಹಿ ಹೇಳಿದ್ದಾರೆ.

ಜಮ್ಮುವಿನ ಕಥುವಾದಲ್ಲಿ ನಡೆದ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ ಮತ್ತು ಉನ್ನಾವೋ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ನಿರಂತರ ಅತ್ಯಾಚಾರವನ್ನು ಖಂಡಿಸಿ ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಆಶ್ರಯದಲ್ಲಿ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ‘ಬೆಳಕಿನೊಂದಿಗೆ ನಮ್ಮ ನಡಿಗೆ’ ಸಾರ್ವಜನಿಕ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಹೆಣ್ಣು ಮಕ್ಕಳನ್ನು ರಕ್ಷಿಸಿ ಅಂತ ಹೇಳುವುದು ಬಿಟ್ಟರೆ ಬೇರೆ ಯಾವ ಮಂತ್ರವೂ ಇಲ್ಲ. ಹೆಣ್ಣನ್ನು ಕಾಣುವ ದೃಷ್ಟಿಯನ್ನು ಸರಿಪಡಿಸಿಕೊಂಡರೆ ದೇಶದ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತವೆ. ಮೊದಲು ಹೆಣ್ಣನ್ನು ನೋಡುವುದನ್ನು ಕಲಿತುಕೊಳ್ಳಿ. ದೌರ್ಜನ್ಯದಿಂದ ಹೆಣ್ಣಿನ ಮರ್ಯಾದೆ ಹೋಗುವುದಲ್ಲ, ಪುರುಷರ ಮರ್ಯಾದೆ ಹೋಗುತ್ತಿದೆ. ವಿಕಾಸಗೊಂಡ ಸಮಾಜ ವಿಕಾರಗೊಳ್ಳುತ್ತಿದೆ. ಆತ್ಮಾವಲೋಕನ ಮಾಡಿಕೊಳ್ಳಿ. ಹೆಣ್ಣಿಗೆ ಸುರಕ್ಷಿತ ಜಾಗವೇ ಈಗ ಇಲ್ಲವಾಗಿದೆ ಎಂದರು.

ತಂತ್ರಜ್ಞಾನ, ವಿಜ್ಞಾನ ಬಳಸಿಕೊಂಡು ಬಾಂಬ್ ತಯಾರಿಸುವುದನ್ನು ಬಿಟ್ಟು ಹೆಣ್ಣಿನ ರಕ್ಷಣೆ ಬೇಕಾದ ವ್ಯವಸ್ಥೆ ಮಾಡಿ. ಆ ದಿಕ್ಕಿನಲ್ಲಿ ಯೋಚನೆ ಮಾಡಿ. ನಮ್ಮ ದೇಹವನ್ನು ರಕ್ಷಣೆ ಮಾಡುವ ಹಕ್ಕು ನಮಗೆ ಇಲ್ಲದಂತೆ ಆಗಿದೆ. ಇದಕ್ಕಿಂತ ದೊಡ್ಡ ನಾಚಿಕೆ ಇಲ್ಲ ಎಂದು ವೈದೇಹಿ ಖೇದ ವ್ಯಕ್ತಪಡಿಸಿದರು.

ಬಳಿಕ ಅವರು ‘ಮಗು ಸತ್ತಿದೆ...ದೇಶ ಸೂತಕದಲ್ಲಿದೆ, ಪೂಜೆ ತಕ್ಷಣ ನಿಲ್ಲಿಸಿ, ಮಗು ಸತ್ತಿದೆ’ ಎಂಬ ಅತ್ಯಾಚಾರಕ್ಕೆ ಒಳಗಾದ ಮಕ್ಕಳ ಕುರಿತ ಕವನ ವಾಚಿಸಿದರು.

ದಸಂಸ(ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್, ಅನುಪಮ ಮಹಿಳಾ ಮಾಸಿಕದ ಉಪಸಂಪಾದಕಿ ಸಬೀಹಾ ಫಾತಿಮಾ, ಹಿರಿಯ ಚಿಂತಕ ಜಿ.ರಾಜಶೇಖರ್, ಕ್ರೈಸ್ತ ಧರ್ಮಗುರು ಫಾ. ವಿಲಿಯಂ ಮಾರ್ಟಿಸ್, ದಸಂಸ ಮುಖಂಡರಾದ ಸುಂದರ್ ಮಾಸ್ತರ್, ಶ್ಯಾಮ ರಾಜ ಬಿರ್ತಿ ಉಪಸ್ಥಿತರಿದ್ದರು.

ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಈ ಸಂದರ್ಭದಲ್ಲಿ ಕ್ಯಾಂಡಲ್ ಬೆಳಗಿಸಿ, ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ವ್ಯಕ್ತಪಡಿಸಲಾಯಿತು.

ಜಿ.ಎಂ.ಶರೀಫ್ ಹಾಗೂ ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News