ಮೊಬೈಲ್ ಸುಲಿಗೆ: ಆರೋಪಿಗಳಿಬ್ಬರ ಬಂಧನ

Update: 2018-04-24 17:22 GMT

ಮಂಗಳೂರು, ಎ. 24: ನಗರದ ವಿವಿಧ ಕಡೆ ಮೊಬೈಲ್ ಸುಲಿಗೆ ಮಾಡಿದ ಇಬ್ಬರು ಆರೋಪಿಗಳನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಸುಲಿಗೆ ಮಾಡಿದ 39 ಸಾವಿರ ರೂ.ವೌಲ್ಯದ 5 ಮೊಬೈಲ್ ಫೋನ್‌ಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

  ಕಸಬಾ ಬೆಂಗ್ರೆಯ ಎಂ.ಜೆ.ಎಂ ಮಸೀದಿ ಬಳಿಯ ನಿವಾಸಿ ಮುಹಮ್ಮದ್ ಇರ್ಫಾನ್ (21) ಹಾಗೂ ಪಾಂಡೇಶ್ವರ ಆಸಿಯಾನ ಅಪಾರ್ಟ್‌ಮೆಂಟ್ ನಿವಾಸಿ, ಮೊಬೈಲ್ ಅಂಗಡಿ ಮಾಲಕ ಸಂಶುದ್ದೀನ್ (32) ಬಂಧಿತ ಆರೋಪಿಗಳು. ಕಳವು ಮಾಡಿದ ಮೊಬೈಲ್‌ಗಳೆಂದು ತಿಳಿದೂ ಸಂಶುದ್ದೀನ್ ಆರೋಪಿಗಳಿಂದ ಕಡಿಮೆ ಬೆಲೆಗೆ ಮೊಬೈಲ್ ಖರೀದಿ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದನೆನ್ನಲಾಗಿದೆ.

ಆರೋಪಿ ಮುಹಮ್ಮದ್ ಇರ್ಫಾನ್ ಬಾಲಕನೊಂದಿಗೆ ಸೇರಿಕೊಂಡು ಮಂಗಳೂರು ನಗರದ ಮಿಲಾಗ್ರಿಸ್, ಹಂಪನಕಟ್ಟೆ, ಪಳ್ನೀರು, ಡೊಂಗರಕೇರಿ, ಕಂಕನಾಡಿಗಳಲ್ಲಿ ಸಾಯಂಕಾಲ ಮತ್ತು ರಾತ್ರಿ ವೇಳೆ ತನಗೆ ನಂಬರ್ ಆಗದೇ ಇರುವ ಬೈಕ್‌ಗಳಲ್ಲಿ ತೆರಳಿ ರಸ್ತೆ ಬದಿಯಲ್ಲಿ ಮೊಬೈಲ್ ಫೋನ್‌ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಗಳ ಮೊಬೈಲ್ ಫೋನ್‌ಗಳನ್ನು ಕಸಿದು ಸುಲಿಗೆ ಮಾಡಿ ಕೊಂಡು ಹೋಗಿದ್ದು, ಮಂಗಳೂರು ನಗರದಲ್ಲಿ ಒಟ್ಟು 5 ಮೊಬೈಲ್ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಂಗಳೂರು ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್, ಎಸಿಪಿ ಎಂ. ಜಗದೀಶ್, ಕದ್ರಿ ಠಾಣೆಯ ನಿರೀಕ್ಷಕ ಮಾರುತಿ ಜಿ. ನಾಯಕ, ಪಿಎಸ್ಸೈ ನೀತು ಆರ್. ಗುಡೆ, ಮತ್ತು ಸಿಬ್ಬಂದಿ ವೆಂಕಟೇಶ್, ಜಯಾನಂದ, ಉಮೇಶ್, ಗಿರೀಶ್ ಜೋಗಿ, ಮೋಹನ್ ಎಸ್., ಶಿವಾನಂದ ಭಜಂತ್ರಿ, ರಾಘವೇಂದ್ರ, ಬಿರೇಂದ್ರ, ಹನುಮಂತ ಅಭಿಲಾಷ್, ಡಾಕಪ್ಪ, ಅನ್ವರ್, ರವಿ ಹಾಗೂ ಮನೋಜ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News