ಲಂಚ ಸ್ವೀಕಾರ ಆರೋಪ ಸಾಬೀತು: ನಿವೃತ್ತ ಉಪ ಖಜಾನಾಧಿಕಾರಿಗೆ ಶಿಕ್ಷೆ

Update: 2018-04-24 17:39 GMT

ಮಂಗಳೂರು, ಎ.24: ತಂದೆಯ ಪಿಎಫ್ ಮತ್ತು ಪೆನ್ಷನ್ ಹಣದ ಚೆಕ್ ನೀಡಲು ಕೇಶವಮೂರ್ತಿ ಸಿ.ಜಿ. ಎಂಬವರಿಂದ ಲೊಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಪುತ್ತೂರು ಖಜಾನೆಯಲ್ಲಿ ಉಪ ಖಜಾನಾಧಿಕಾರಿಯಾಗಿದ್ದ ವೆಂಕಟ್ರಮಣರಿಗೆ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತಂದೆಯ ಪಿಎಫ್ ಮತ್ತು ಪೆನ್ಷನ್ ಹಣದ ಚೆಕ್ ನೀಡಲು ಕೇಶವಮೂರ್ತಿ ಸಿ.ಜಿ. ಎಂಬವರಿಂದ ಪುತ್ತೂರು ಖಜಾನೆಯಲ್ಲಿ ಉಪ ಖಜಾನಾಧಿಕಾರಿಯಾಗಿದ್ದ ವೆಂಕಟ್ರಮಣ 2010ರ ಡಿ.13ರಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೇಶವಮೂರ್ತಿಯವರಿಂದ 2,500 ರೂ. ಲಂಚ ಪಡೆದ ಆರೋಪದಲ್ಲಿ ವೆಂಕಟ್ರಮಣ ಲೋಕಾಯುಕ್ತರ ಬಲೆ ಬಿದ್ದಿದ್ದರು. 68 ವರ್ಷದ ಆರೋಪಿ ವೆಂಕಟ್ರಮಣ ಇದೀಗ ನಿವೃತ್ತರಾಗಿದ್ದಾರೆ.

ಕಲಂ 7ರ ಅಡಿಯಲ್ಲಿ ಎಸಗಿದ ಅಪರಾಧಕ್ಕೆ 1 ವರ್ಷ ಸಾದಾ ಸಜೆ ಮತ್ತು 10,000 ದಂಡ. ಕಲಂ 13 (1) (ಡಿ)ಯಲ್ಲಿ ಎಸಗಿದ ಅಪರಾಧಕ್ಕೆ 1 ವರ್ಷ ಸಾದಾ ಸಜೆ ಮತ್ತು 10,000 ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಆಗಿನ ಲೋಕಾಯುಕ್ತ ಇನ್ಸ್‌ಪೆಕ್ಟರ್ ಉದಯ ಎಂ. ನಾಯಕ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಲೋಕಾಯುಕ್ತ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ, ನ್ಯಾಯವಾದಿ ಕೆ.ಎಸ್.ಎನ್.ರಾಜೇಶ್ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News