×
Ad

ಮತದಾರರೇ ಎಚ್ಚರ…ಕೋಮುದ್ವೇಷ ಹರಡುತ್ತಾ ಮತ ಕೇಳಲು ಬರುತ್ತಿದ್ದಾರೆ ಕಿಡಿಗೇಡಿಗಳು

Update: 2018-04-25 19:44 IST

ವಿಧಾನಸಭಾ ಚುನಾವಣೆಗೆ ಕರ್ನಾಟಕ ಸಜ್ಜಾಗುತ್ತಿರುವ ನಡುವೆಯೇ ವಿವಿಧ ಪಕ್ಷಗಳ ಪ್ರಚಾರಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಆಡಳಿತ ಹಾಗು ವಿಪಕ್ಷಗಳು ಪರಸ್ಪರ ಕೆಸರೆರಚಾಟ ನಡೆಸುತ್ತಿದೆ. ಈ ನಡುವೆ ಸಾಮಾಜಿಕ ಜಾಲತಾಣವೊಂದರಲ್ಲಿ ಮತದಾನ ಜಾಗೃತಿ ಹೆಸರಿನಲ್ಲಿ ವೈರಲಾಗುತ್ತಿರುವ ನೋಟಿಸ್ ಗಳು ಕೋಮುದ್ವೇಷ ಹರಡುವ ಆತಂಕ ಸೃಷ್ಟಿಸಿದೆ.

‘ರಾಷ್ಟ್ರ ಗೆಲ್ಲಿಸಿ’ ಅಭಿಯಾನ ಎಂಬ ಈ ಹೆಸರಿನ ಪೋಸ್ಟರ್ ನಲ್ಲಿ ಸಿದ್ದರಾಮಯ್ಯ ಸರಕಾರವನ್ನು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ಟೀಕಿಸಲಾಗಿದೆ ಹಾಗು ಕೋಮುದ್ವೇಷ ಹರಡುವ ತಂತ್ರವನ್ನು ಬಳಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. “ಕರ್ನಾಟಕ ಚುನಾವಣೆಯಲ್ಲಿ ಹಿಂದೂಪರ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿದೆ” ಎಂದು ಕರೆ ನೀಡಲಾಗಿದೆ. ಜಾತ್ಯಾತೀತ ಸಿದ್ಧಾಂತದ, ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತದಲ್ಲಿ ಧರ್ಮದ ಆಧಾರದಲ್ಲಿ ಜನಪ್ರತಿನಿಧಿಯ ಆಯ್ಕೆ ನಡೆಸಬೇಕೆನ್ನುವ ಈ ಷಡ್ಯಂತ್ರವು ದೇಶದ ಭವಿಷ್ಯಕ್ಕೆ ಮಾರಕ ಹಾಗು ಚುನಾವಣಾ ನೀತಿಯನ್ನು ಉಲ್ಲಂಘಿಸಿದಂತೆ. ಈಗಾಗಲೇ ರಾಜ್ಯವು ಕೆಲವು ಸಮಾಜಘಾತುಕ ಶಕ್ತಿಗಳ ಸ್ವಾರ್ಥದಿಂದ ಧರ್ಮದ ಆಧಾರದಲ್ಲಿ ಒಡೆದು ಹೋಗಿದೆ. ಇದೀಗ ಚುನಾವಣೆಯನ್ನೂ ಧರ್ಮದ ಆಧಾರದಲ್ಲಿ ನಡೆಸಬೇಕೆಂಬ ಕರೆ ನೀಡಿರುವುದು ಅಪಾಯಕಾರಿ ಬೆಳವಣಿಗೆ ಎಂದು ನಾಗರಿಕರು ಅಭಿಪ್ರಾಯಿಸುತ್ತಿದ್ದಾರೆ.

"ಈ ಪೋಸ್ಟರ್ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರನ್ನು ಎಚ್ಚರಿಸಲು ತಯಾರಿಸಲಾದ ಪೋಸ್ಟರ್ ಅಥವಾ ಧರ್ಮ ಸಂರಕ್ಷಣೆ ಎಂಬ ಹೆಸರಿನಲ್ಲಿ ಕೋಮು ಪ್ರಚೋದನೆ ಹರಡುವ ಪೋಸ್ಟರೇ?" ಎಂದು ಹಲವರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

“ಅಂದು ಒಂದು ಕೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ಕುರ್ ಆನ್.. ಇಂದು ಮತಾಂಧತೆ-ಸೆಕ್ಯುಲರ್ ಪಕ್ಷಗಳಿಂದ ಅಲ್ಪಸಂಖ್ಯಾತರ ಓಲೈಕೆ, ಅಂದು ಹಿಂದೂಗಳಿಗೆ ತಲೆಗಂದಾಯ.. ಇಂದು ಅಲ್ಪಸಂಖ್ಯಾತ ಪತ್ರಕರ್ತರಿಗೆ ಉಡುಗೊರೆ, ಶಾದಿ ಭಾಗ್ಯ, ಶಾದಿ ಮಹಲ್….." ಹೀಗೆ ಸಾಲು ಸಾಲು ಪ್ರಚೋದನಕಾರಿ, ಕೋಮುದ್ವೇಷ ಹರಡುವ ವಿಷಯಗಳು ನೋಟಿಸ್ ನಲ್ಲಿದೆ.

ಈ ನೋಟಿಸ್ ಯಾರದ್ದು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ ‘ರಾಷ್ಟ್ರ ಗೆಲ್ಲಿಸಿ’ ಅಭಿಯಾನ, ಮುದ್ರಣ: ರಾಷ್ಟ್ರೋತ್ಥಾನ ಮುದ್ರಣಾಲಯ, ಬೆಂಗಳೂರು ಎಂದು ವಿಳಾಸದಲ್ಲಿ ತಿಳಿಸಲಾಗಿದೆ.

ಚುನಾವಣೆಗಳ ಮೊದಲು ಸಾಮಾನ್ಯವಾಗಿ ಸರಕಾರದ ವೈಫಲ್ಯ, ಅಭಿವೃದ್ಧಿ ಕಾರ್ಯಗಳಲ್ಲಿ ನಿರುತ್ಸಾಹ ಹೀಗೆ ನಾಡಿನ ಒಳಿತಿನ ಬಗೆಗಿನ ಅಂಶಗಳನ್ನೇ ಮುಂದಿಟ್ಟು ಆಡಳಿತ ಪಕ್ಷದ ಮೇಲೆ ಆರೋಪ ಮಾಡಲಾಗುತ್ತಿತ್ತು ಹಾಗು ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಒಂದು ಧರ್ಮದ ವಿರುದ್ಧ ಮತ್ತೊಂದು ಧರ್ಮವನ್ನು ಎತ್ತಿಕಟ್ಟಿ, ಕೋಮುದ್ವೇಷವನ್ನು ಹರಡಿ, ಧರ್ಮದ ಆಧಾರದಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮತ ಯಾಚಿಸಲಾಗುತ್ತಿದೆ.

ಚುನಾವಣೆಯ ಸಂದರ್ಭವನ್ನು ಬಳಸಿಕೊಂಡು ಧರ್ಮ-ಧರ್ಮಗಳ ನಡುವೆ ದ್ವೇಷ ಸೃಷ್ಟಿಸುತ್ತಿರುವ ಕಿಡಿಗೇಡಿಗಳ ಕೃತ್ಯವನ್ನು ಸಂಬಂಧಪಟ್ಟವರು ಮಟ್ಟ ಹಾಕಬೇಕು. ಈ ಬಗ್ಗೆ ಚುನಾವಣಾಧಿಕಾರಿಗಳು, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎನ್ನುವುದು ನಾಗರಿಕರ ಒತ್ತಾಯ.

ಕೋಮುದ್ವೇಷ ಹರಡುವ ಯಾವುದೇ ಹೇಳಿಕೆ, ಬರಹ, ಪೋಸ್ಟರ್, ಬ್ಯಾನರ್ ಇತ್ಯಾದಿಯು ಸಾಮಾಜಿಕ ಜಾಲತಾಣ ಸಹಿತ ಎಲ್ಲೇ ಕಂಡು ಬಂದರೂ ಕೂಡ ದೂರಿನ ಆಧಾರದ ಮೇಲೆ ಪೊಲೀಸ್ ಇಲಾಖೆ ಕ್ರಮ ಜರಗಿಸಲಿದೆ. 'ರಾಷ್ಟ್ರ ಗೆಲ್ಲಿಸಿ' ಅಭಿಯಾನ’ದ ಪೋಸ್ಟರ್ ಬಗ್ಗೆ ಯಾವುದೇ ದೂರು, ಮಾಹಿತಿ ಬಂದಿಲ್ಲ. ಆದರೂ ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗುವುದು.

-ಡಾ. ಬಿ.ಆರ್.ರವಿಕಾಂತೇಗೌಡ , ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News