×
Ad

ಎ.28ರಂದು ಬಿ.ಸಿ.ರೋಡ್, ಉಳ್ಳಾಲದಲ್ಲಿ ಸಂವಿಧಾನ ಉಳಿವಿಗಾಗಿ ಸ್ವಾಭಿಮಾನಿ ಸಮಾವೇಶ

Update: 2018-04-25 20:03 IST

ಮಂಗಳೂರು, ಎ.25: ಸಂವಿಧಾನದ ಉಳಿವಿಗಾಗಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಸ್ವಾಭಿಮಾನಿ ಸಮಾವೇಶ’ದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ಹಾಗೂ ಉಳ್ಳಾಲದಲ್ಲಿ ಎ.28ರಂದು ಸಮಾವೇಶ ಆಯೋಜಿಸಲಾಗಿದೆ. ಇದರಲ್ಲಿ ದಲಿತ ಮುಖಂಡ, ಶಾಸಕ ಜಿಗ್ನೇಶ್ ಮೆವಾನಿ ಭಾಗವಹಿಸುವರು ಎಂದು ಕಾರ್ಯಕ್ರಮದ ಸಂಘಟಕರು ಹಾಗೂ ಸಂವಿಧಾನ ಉಳಿಸಿ ಕರ್ನಾಟಕ ಸಮಿತಿಯ ಜಿಲ್ಲಾ ಸಮಿತಿಯ ಮುಖಂಡ ಸುರೇಶ್ ಭಟ್ ಬಾಕ್ರಬೈಲ್ ತಿಳಿಸಿದ್ದಾರೆ.

ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.28ರಂದು ಬೆಳಗ್ಗೆ 10:30ಕ್ಕೆ ಬಿ.ಸಿ ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಹಾಗೂ ಅದೇ ದಿನ ಸಂಜೆ 4:30ಕ್ಕೆ ತೊಕ್ಕೊಟ್ಟಿನ ಯುನಿಟಿ ಹಾಲ್‌ನಲ್ಲಿ ಸ್ವಾಭಿಮಾನಿ ಸಮಾವೇಶ ನಡೆಯಲಿದೆ.ಸಮಾವೇಶದಲ್ಲಿ ಜಿಗ್ನೇಶ್ ಮೆವಾನಿ ಜೊತೆ ಅಲಹಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕಿ ರಿಚಾ ಸಿಂಗ್, ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಮಿತಿಯ ರಾಜ್ಯ ಸಮಿತಿಯ ಮುಖಂಡರಾದ ಕೆ.ಎಲ್.ಅಶೋಕ್ ಭಾಗವಹಿಸಲಿರುವರು ಎಂದು ವಿವರಿಸಿದರು.

ಇತ್ತೀಚೆಗೆ ಸಂವಿಧಾನವನ್ನು ಬದಲಾಯಿಸುವ ರಾಜಕಾರಣಿಗಳ ಹೇಳಿಕೆಗಳ ಜೊತೆ ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಾಧೀಶರ ಹೇಳಿಕೆಯನ್ನು ಗಮನಿಸಿದಾಗ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಉಂಟಾಗಲಿರುವ ಅಪಾಯದ ಅರಿವಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ ಹೋರಾಟಗಾರ ದೊರೆ ಸ್ವಾಮಿ ನೇತೃತ್ವದಲ್ಲಿ ಹಾಗೂ ಹಿರಿಯ ನ್ಯಾಯವಾದಿ ಎ.ಕೆ.ಸುಬ್ಬಯ್ಯ ಅವರ ಮಾರ್ಗದರ್ಶನದಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ವೇದಿಕೆ ರಚನೆಯಾಗಿದೆ. ಈ ವೇದಿಕೆಯಡಿಯಲ್ಲಿ ದೇಶದ ಸಂವಿಧಾನದ ಮಹತ್ವ ಹಾಗೂ ಅದನ್ನು ಸಂರಕ್ಷಿಸುವ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಶಿರಸಿ, ಚಿತ್ರದುರ್ಗ, ಗಂಗಾವತಿ, ಉಡುಪಿ ಮೊದಲಾದೆಡೆಗಳಲ್ಲಿ ಈಗಾಗಲೇ ಸ್ವಾಭಿಮಾನಿ ಸಮಾವೇಶ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಕೋಲಾರ, ಚಿಕ್ಕ ಬಳ್ಳಾಪುರ, ವಾಡಿ, ಗುಲ್ಬರ್ಗಾ ಸೇರಿದಂತೆ ಸುಮಾರು ಹನ್ನೆರೆಡು ಸ್ಥಳಗಳಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ದ.ಕ. ಜಿಲ್ಲಾ ಸಮಿತಿಯ ಮುಖಂಡರಾದ ರಘುವೀರ್ ಸೂಟರ್ ಪೇಟೆ, ಇಸ್ಮತ್ ಪಜೀರ್, ಮುಹಮ್ಮದ್ ಕುಂಞಿ, ಎಸ್.ಪಿ.ಆನಂದ, ಮುಹಮ್ಮದ್ ಮುಸ್ತ್ತಫ ಉಪ್ಪಿನಂಗಡಿ, ಅಶೋಕ್ ಕೊಂಚಾಡಿ, ಅನಿಲ್ ಕುದ್ಕೋರಿಗುಡ್ಡ, ಈಶ್ವರ ಸೂಟರ್‌ಪೇಟೆ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News