ರೈಲಿಗೆ ಕಲ್ಲೆಸೆತ ಶಿಕ್ಷಾರ್ಹ ಅಪರಾಧ: ಕೊಂಕಣ ರೈಲ್ವೆ ಎಚ್ಚರಿಕೆ
Update: 2018-04-25 20:36 IST
ಉಡುಪಿ, ಎ.25: ಕೊಂಕಣ ರೈಲ್ವೆ ಮಾರ್ಗದಲ್ಲಿ ಇತ್ತೀಚೆಗೆ ಚಲಿಸುವ ರೈಲಿಗೆ ಕಲ್ಲೆಸೆಯುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇದರಿಂದ ರೈಲಿನಲ್ಲಿರುವ ಪ್ರಯಾಣಿಕರು ಗಂಭೀರವಾಗಿ ಗಾಯಗೊಳ್ಳುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಸದ್ಯ ಶಾಲೆಗಳಿಗೆ ರಜೆಯಿದ್ದು, ಶಾಲಾ ಮಕ್ಕಳು ಮೋಜಿಗಾಗಿ, ಪ್ರಕರಣಗಳ ಗಂಭೀರತೆಯನ್ನು ಅರಿಯದೇ ಇಂತಹ ಕೃತ್ಯ ಎಸಗುತ್ತಿರುವುದು ಕಂಡು ಬರುತ್ತಿದೆ. ಈ ಕುರಿತಂತೆ ಪೋಷಕರು ತಮ್ಮ ಮಕ್ಕಳಿಗೆ ಅರಿವು ಮೂಡಿಸುವಂತೆ ಹಾಗೂ ರೈಲಿಗೆ ಕಲ್ಲೆಸೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಪ್ರಾಪ್ತ ವಯಸ್ಸಿನವರು ಮಾಡುವ ಇಂತಹ ಅಪರಾಧಗಳಿಗೆ ಅವರ ಪೋಷಕರಿಗೂ ಸಹ ಕಾನೂನಿನ ರೀತಿ ಶಿಕ್ಷೆ ವಿಧಿಸಲಾಗುತ್ತದೆ.
ರೈಲುಗಳ ಸುಗಮ ಸಂಚಾರ ಮತ್ತು ಪ್ರಯಾಣಿಕರ ಸುರಕ್ಷತೆ ಕುರಿತಂತೆ ರೈಲ್ವೆ ಇಲಾಖೆಯೊಂದಿಗೆ ಎಲ್ಲರೂ ಸಹಕರಿಸುವಂತೆ ಉಡುಪಿ ಕೊಂಕಣ ರೈಲ್ವೆಯ ಆರ್‌ಪಿಎಫ್ ಇನ್ಸ್‌ಪೆಕ್ಟರ್ ಅವರ ಪ್ರಕಟನೆ ತಿಳಿಸಿದೆ.