×
Ad

ಉಡುಪಿ ಮಲೇರಿಯಾ ಮುಕ್ತ ಜಿಲ್ಲೆಯಾಗಿಸಲು ಕ್ರಮ: ಡಾ.ರೋಹಿಣಿ

Update: 2018-04-25 20:42 IST

ಉಡುಪಿ, ಎ.25: ಉಡುಪಿ ಜಿಲ್ಲೆಯನ್ನು 2020ರ ವೇಳೆಗೆ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ತಿಳಿಸಿದ್ದಾರೆ.

ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನಡೆದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಉಡುಪಿ ಜಿಲ್ಲೆಯು ಪ್ರಸ್ತುತ ಮಲೇರಿಯ ರೋಗ ಕಂಡುಬರುವ ಜಿಲ್ಲೆಗಳಲ್ಲಿ ಕೆಟಗರಿ 2ರಿಂದ 1 ಸ್ಥಾನಕ್ಕೆ ಇಳಿದಿದೆ. 2015ರಲ್ಲಿ ಜಿಲ್ಲೆಯಲ್ಲಿ 1,366 ಮಲೇರಿಯಾ ಪ್ರಕರಣ ಕಂಡುಬಂದಿದ್ದು, 2016ರಲ್ಲಿ 1,168 ಹಾಗೂ 2017ರಲ್ಲಿ 513 ಪ್ರಕರಣಗಳು ಪತ್ತೆಯಾಗಿವೆ. ಈ ಅವಧಿಯಲ್ಲಿ ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ. 2020ರ ಸುಮಾರಿಗೆ ಈ ಪ್ರಮಾಣವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ ಎಂದವರು ವಿವರಿಸಿದರು.

ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಪತ್ತೆಯಾಗುವ ಸಂಶಯಾಸ್ಪದ ಮಲೇರಿಯಾ ಪ್ರಕರಣ ವರದಿಯನ್ನು ಆರೋಗ್ಯ ಇಲಾಖೆಗೆ ನೀಡುವಂತೆ ಹಾಗೂ ಜನರು ಜ್ವರ ಬಂದ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಿದ ಡಾ.ರೋಹಿಣಿ, ಜಿಲ್ಲೆಯಲ್ಲಿ ಮಲೇರಿಯಾಗೆ ಸಂಬಂದಿಸಿದಂತೆ ಸಾಕಷ್ಟು ಔಷಧ ದಾಸ್ತಾನು ಲಭ್ಯವಿದ್ದು, ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಮಲೇರಿಯಾಕ್ಕೆ ಚಿಕಿತ್ಸೆ ನೀಡಲು ವೈದ್ಯರಿಗೆ ವಿಶೇಷ ತರಬೇತಿ ನೀಡಲಾಗಿದೆ ಎಂದರು.

ಜನರು ಸಕಾಲದಲ್ಲಿ ಚಿಕಿತ್ಸೆ ಪಡೆಯುವುದರ ಮೂಲಕ ಮಲೇರಿಯಾದಿಂದ ಮುಕ್ತಿ ಪಡೆಯುವುದಲ್ಲದೇ ರೋಗ ಹರಡದಂತೆ ತಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.

ಜಿಲ್ಲೆಯಲ್ಲಿ ಮಲೇರಿಯಾ ರೋಗ ಹರಡಬಹುದಾದ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಆ ಪ್ರದೇಶದಲ್ಲಿ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಲು ಜನರಲ್ಲಿ ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಪ್ರದೇಶಗಳ ಜನರಿಗೆ ಸೊಳ್ಳೆ ಪರದೆಗಳನ್ನು ವಿತರಿಸಲು ಕ್ರಮ ಕೈಗೊಂಡಿದ್ದು, ಈ ಬಾರಿ 25,593 ಸೊಳ್ಳೆ ಪರದೆ ಜಿಲ್ಲೆಗೆ ಸರಬರಾಜು ಆಗಿದೆ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಸಾರ್ವಜನಿಕರು ಎಚ್ಚರ ವಹಿಸುವಂತೆ ಹಾಗೂ ಮನೆಯ ಬಾವಿಗಳಲ್ಲಿ ಗಪ್ಪಿ ಮತ್ತು ಗಂಬೂಷಿಯಾ ಮೀನುಗಳನ್ನು ಸಾಕುವಂತೆ ಡಾ.ರೋಹಿಣಿ ತಿಳಿಸಿದರು.

ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಗಪ್ಪಿಮತ್ತು ಗಂಬೂಷಿಯಾ ಮೀನು ಸಾಕಾಣಿಕ ತೊಟ್ಟಿಗಳನ್ನು ನಿರ್ಮಿಸುವಂತೆ ಹಾಗೂ ಅಲ್ಲಿನ ಬೆಳೆದ ಮೀನುಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುವಂತೆ ಸೂಚಿಸಲಾಗಿದೆ. ಜಿಲ್ಲೆಯ ಕಲ್ಲು ಕ್ವಾರಿಗಳಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಸಹ ಈ ಮೀನುಗಳನ್ನು ಸಾಕಣೆ ಮಾಡುವಂತೆ ಕ್ವಾರಿಗಳ ಮಾಲಕರಿಗೆ ಸೂಚಿಸಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸ್ವಚ್ಚತೆಯನ್ನು ಕಾಪಾಡುವಂತೆ ಹಾಗೂ ಅಲ್ಲಿನ ಮಾಲಕರಿಗೆ ಹಾಗೂ ಕಾರ್ಮಿಕರಿಗೆ ಮಲೇರಿಯಾ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಡಾ.ರೋಹಿಣಿ ತಿಳಿಸಿದರು.

ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಪ್ರೇಮಾನಂದ ಮಾತನಾಡಿ, ಮಲೇರಿಯಾ ನಿಯಂತ್ರಣ ಕ್ರಮಗಳಿಂದ ಡೆಂಗ್ ಹರಡುವುದನ್ನೂ ಸಹ ನಿಯಂತ್ರಿಸಬಹುದಾಗಿದೆ. ಉಡುಪಿ ನಗರ ಪ್ರದೇಶದ ಕೆಲವೆಡೆಗಳಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ಹರಡುವ ಪ್ರಮಾಣ ಅಧಿಕವಾಗಿದ್ದು, ಅಂತಹ ಪ್ರದೇಶದಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಜ್ವರ ಬಂದಲ್ಲಿ ಕೂಡಲೇ ರಕ್ತ ಪರೀಕ್ಷೆ ಮಾಡಿಸುವಂತೆ ತಿಳಿಸಿದ ಅವರು, ಈ ಪ್ರದೇಶದಲ್ಲಿ ಮನೆ ಭೇಟಿಗೆ ಬರುವ ಆರೋಗ್ಯ ಕಾರ್ಯಕರ್ತರೂ ಸಹ ರಕ್ತ ಪರೀಕ್ಷೆ ಮಾಡಲಿದ್ದಾರೆ. ಸೊಳ್ಳೆ ಪರದೆಗಳನ್ನು ಬಳಸುವುದರಿಂದ ಗಣನೀಯ ಪ್ರಮಾಣದಲ್ಲಿ ಮಲೇರಿಯಾ ಮತ್ತು ಡೆಂಗ್ ಹರಡುವುದರಿಂದ ಮುಕ್ತವಾಗಬಹುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ, ಆರ್‌ಸಿಎಚ್ ಅಧಿಕಾರಿ ಡಾ.ಎಂ.ಜಿ ರಾಮ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್ ಹಾಗೂ ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News