×
Ad

ಪಡುಬಿದ್ರೆಯಲ್ಲಿ ಮತದಾನದ ಜನಜಾಗೃತಿಗಾಗಿ ಯಕ್ಷಗಾನ

Update: 2018-04-25 20:46 IST

ಉಡುಪಿ, ಎ.25: ತಪ್ಪದೇ ಮತದಾನದ ಮಾಡುವ ಮೂಲಕ ನಮ್ಮ ದೇಶದ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಿ ಎಂದು ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಹೇಳಿದ್ದಾರೆ.

ಪಡುಬಿದ್ರೆಯ ಸಂತೆ ಮಾರುಕಟ್ಟೆಯಲ್ಲಿ ಬುಧವಾರ ಆಯೋಜಿಸಲಾದ ‘ಮತ ಮಹಿಮಾಮೃತ’ ಯಕ್ಷಗಾನದ ಮೂಲಕ ಜನರಿಗೆ ಮತದಾನದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಳೆದ ಸಾಲಿನಲ್ಲಿ ಚುನಾವಣೆ ಮತದಾನ ಮಾಡದವರು ಈ ಬಾರಿ ಆತ್ಮಾವಲೋಕನ ಮಾಡಿಕೊಂಡು ಮತದಾನ ಮಾಡಿ ಎಂದ ಸಿಇಒ, ನೈತಿಕ ಮತದಾನಕ್ಕೆ ಒತ್ತು ನೀಡುವಂತೆ ತಿಳಿಸಿದರು. ‘ಧರೆಯ ಭಾಗ್ಯವ ಕೆಡಿಸಬೇಡಿ, ಸುರೆಯ ಧನದಾಮಿಷಕ್ಕೆ ಬಗ್ಗದೆ ಮತದಾನ ಮಾಡಿ’ ಎಂಬ ಸಂದೇಶವನ್ನೊಳಗೊಂಡ ಯಕ್ಷಗಾನ ಕಥಾ ಪ್ರಸಂಗ ನೆರೆದ ಜನರಿಗೆ ಮಾಹಿತಿಯ ಜೊತೆಗೆ ಮನೋರಂಜನೆಯನ್ನೂ ನೀಡಿತು.

ಸಮೃದ್ಧಿಪುರದ ಅರಸ ತನ್ನ ಜನರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಮತದಾನ ಪ್ರಕ್ರಿಯೆಯನ್ನು ವಿವರಿಸುವ ರೀತಿ ಉತ್ತಮವಾಗಿ ಮೂಡಿಬಂತು. ಯಕ್ಷಗಾನದಲ್ಲಿ ಪಿಂಕ್ ಮತಗಟ್ಟೆ, ವಿಶೇಷ ಚೇತನರಿಗೆ ಮತಗಟ್ಟೆಗೆ ತಲುಪಲು ಇರುವ ವಾಹನದ ವ್ಯವಸ್ಥೆ ಬಗ್ಗೆ ಹಾಗೂ ವಿವಿಪ್ಯಾಟ್ ಒಳಗೊಂಡಂತೆ ಎಲ್ಲ ಮಾಹಿತಿಗಳಿದ್ದವು.

‘ಕಾಸಿದ್ದರೆ ಕೈಲಾಸವು ದೊರೆ ಕೇಳು ಸಂತೋಷದಿ ಮತವನು ನೀಡುವೆ ನಾ, ಹೆಂಡವ ಕೊಟ್ಟರೆ ಖಂಡಿತಾ ನೀಡುವೆ ದಂಡವಲ್ಲದ ಮತವನು’ ಎಂಬ ಹಾಡುಗಳು ಹಣ ಹೆಂಡಗಳ ಆಮಿಷಕ್ಕೆ ಒಳಗಾಗದೆ ಮತದಾನ ಮಾಡಿ ಎಂಬ ಸಂದೇಶಗಳು, ಹಾಸ್ಯಗಾರನ ಹಾಸ್ಯದೊಂದಿಗೆ ನೈತಿಕ ಮತದಾನದ ಅಗತ್ಯವನ್ನು ಮನೋಜ್ಞವಾಗಿ ವಿವರಿಸಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ವಿದ್ಯಾಂಗ ಇಲಾಖೆಯ ನಾಗೇಶ್ ಶಾನ್‌ಬಾಗ್, ನಾಗರಾಜ್, ಪಿಡಿಒಗಳಾದ ಪ್ರಮೀಳಾ, ಮಹೇಶ್, ಕಲಾಪೀಠ ಕೋಟ ತಂಡದವರು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News