ಉತ್ತರ ಕನ್ನಡಕ್ಕೆ ಎ.26ರಂದು ರಾಹುಲ್ ಆಗಮನ: ಕಾಂಗ್ರೆಸ್ ಮುಖಂಡರಲ್ಲಿ ಉತ್ಸಾಹ
ಭಟ್ಕಳ, ಎ.25: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗೆ ತೆರೆಬಿದ್ದಿದೆ. ನಾಮಪತ್ರವನ್ನು ಹಿಂದೆಗೆದುಕೊಳ್ಳಲು ಎ.27 ಅಂತಿಮ ದಿನವಾಗಿದ್ದು, ಅಂದು ಸಂಜೆ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಅಂತಿಮ ಚಿತ್ರಣ ಸ್ಪಷ್ಟವಾಗಲಿದೆ. ಅದರೊಂದಿಗೆ ಚುನಾವಣೆಯ ಅಸಲಿ ಫೈಟ್ ಆರಂಭಗೊಳ್ಳಲಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎ.26ರಂದು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ಅವರ ಆಗಮನದೊಂದಿಗೆ ಕಾಂಗ್ರೆಸ್‌ನ ಚುನಾವಣಾ ಪ್ರಚಾರ ರಂಗೇರಿಸಿಕೊಳ್ಳಲಿದೆ.
ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿದೆ. ಮತ್ತೊಮ್ಮೆ ಅಭಿವೃದ್ಧಿಗೆ ತಮ್ಮ ಮತ ಎಂದೂ ಮತದಾರರು ಘೋಷಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಆಗಮನವು ಜಿಲ್ಲಾ ಕಾಂಗ್ರೆಸ್‌ಗೆ ಆನೆ ಬಲ ತುಂಬಲಿದೆ.
ಎ.26ರಂದು ಸಂಜೆ 6 ಗಂಟೆಗೆ ಭಟ್ಕಳಕ್ಕೆ ಆಗಮಿಸುವ ರಾಹುಲ್ ಗಾಂಧಿ, ವೆಂಕಟಾಪುರದ ಐಸ್ ಫ್ಯಾಕ್ಟರಿ ಬಳಿಯ ಮೈದಾನದಲ್ಲಿ ಸಾರ್ವಜನಿಕರು, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕಾಗಿ ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದೆ. ಸಮಾವೇಶದಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಮಾವೇಶಕ್ಕೂ ಪೂರ್ವದಲ್ಲಿ ರಾಹುಲ್ ಗಾಂಧಿ ಜಿಲ್ಲೆಯ ಕಾರವಾರ, ಕುಮಟಾ, ಅಂಕೋಲಾ ತಾಲೂಕುಗಳಲ್ಲಿ ವಿಶೇಷ ರ್ಯಾಲಿಯನ್ನು ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ.
ಭದ್ರತಾ ಅಧಿಕಾರಿಗಳಿಂದ ಪರಿಶೀಲನೆ:
ಎ.26ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಟ್ಕಳದ ವೆಂಕಟಾಪುರದ ಐಸ್ ಫ್ಯಾಕ್ಟರಿ ಬಳಿಯ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಭದ್ರತೆ ವ್ಯವಸ್ಥೆ ಕಲ್ಪಿಸುವ ಹಿನ್ನೆಲೆಯಲ್ಲಿ ಮಂಗಳವಾರ ದಿಲ್ಲಿಯಿಂದ ಸ್ಪೆಶಲ್ ಪ್ರೋಟೆಕ್ಶೆನ್ ಗ್ರೂಪ್ ತಂಡದ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಭದ್ರತಾ ತಂಡದ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಸಾಥ್ ನೀಡಿದ್ದಾರೆ. ಸಮಾವೇಶ ನಡೆಯಲಿರುವ ಮೈದಾನದ ಪಕ್ಕದಲ್ಲಿಯೇ ಹೆಲಿಪ್ಯಾಡ್‌ಗೆ ಈಗಾಗಲೇ ಸ್ಥಳವನ್ನು ನಿಗದಿ ಮಾಡಲಾಗಿದೆ. ದಿಲ್ಲಿಯ ಭದ್ರತಾ ಅಧಿಕಾರಿಗಳು ಸಮಾವೇಶ ಸೇರಿದಂತೆ ವೇದಿಕೆಯ ರೂಪುರೇಷೆಯನ್ನು ವೇದಿಕೆಯ ತಯಾರಕರಿಗೆ ಸೂಕ್ತ ಸಲಹೆ ಸೂಚನೆ ನೀಡಿದರು. ಇದೇ ವೇಳೆ ಮೈದಾನದ ಪಕ್ಕದ ನಿರ್ಮಾಣ ಹಂತದ ಕಟ್ಟಡವನ್ನು ಸಹ ಪರಿಶೀಲಿಸಿ ಸಮಾವೇಶಕ್ಕೆ ಯಾವುದೇ ತೊಂದರೆ ತೊಡಕಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿಠ್ಠಲ ನಾಯ್ಕ, ಜಾಲಿ ಪಪಂ ಅಧ್ಯಕ್ಷ ಅಬ್ದುಲ್ ರಹೀಂ ಮತ್ತಿತರರು ಉಪಸ್ಥಿತರಿದ್ದರು.