ಚಲಿಸುತ್ತಿದ್ದ ರೈಲಿನಿಂದ ಜಿಗಿದು ಅತ್ಯಾಚಾರದಿಂದ ಮಹಿಳೆಯನ್ನು ರಕ್ಷಿಸಿದ ಪೊಲೀಸ್ ಕಾನ್‌ಸ್ಟೇಬಲ್
ಚೆನ್ನೈ,ಎ.25: ರೈಲ್ವೆ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಸಿನಿಮೀಯ ಸಾಹಸವನ್ನು ಮೆರೆದು ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗುವ ಪಾತಕಿಯ ಯತ್ನವನ್ನು ವಿಫಲಗೊಳಿಸಿದ ಘಟನೆ ಇಲ್ಲಿಯ ಪಾರ್ಕ್ ಟೌನ್ ನಿಲ್ದಾಣದಲ್ಲಿ ನಡೆದಿದೆ.
ರೈಲ್ವೆ ರಕ್ಷಣಾ ಪಡೆ(ಆರ್‌ಪಿಎಫ್)ಯ ಎಸ್‌ಐ ಎಸ್.ಸುಬ್ಬಯ್ಯ,ಕಾನ್‌ಸ್ಟೇಬಲ್ ಕೆ.ಶಿವಾಜಿ ಮತ್ತು ಇನ್ನೋರ್ವ ಕಾನ್‌ಸ್ಟೇಬಲ್ ಸೋಮವಾರ ರಾತ್ರಿ ಗಸ್ತು ಕರ್ತವ್ಯಕ್ಕಾಗಿ ವೆಲಚೇರಿಯಿಂದ ಚೆನ್ನೈ ಬೀಚ್‌ಗೆ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. 11.45ರ ಸುಮಾರಿಗೆ ಚಿಂತಾದ್ರಿಪೇಟ್ ನಿಲ್ದಾಣದಿಂದ ರೈಲು ಹೊರಟ ಬೆನ್ನಿಗೇ ಪಕ್ಕದ ಮಹಿಳಾ ಬೋಗಿಯಿಂದ ಚೀರಾಟ ಕೇಳಿಬಂದಿತ್ತು. ದೂರ ಪ್ರಯಾಣದ ರೈಲುಗಳಲ್ಲಿರುವಂತೆ ಈ ರೈಲಿನಲ್ಲಿ ಒಂದು ಬೋಗಿಯಿಂದ ಇನ್ನೊಂ ದು ಬೋಗಿಗೆ ಒಳಗಿನಿಂದಲೇ ಸಾಗುವ ವ್ಯವಸ್ಥೆಯಿರಲಿಲ್ಲ. ಹೀಗಾಗಿ ಶಿವಾಜಿ ಮುಂದಿನ ನಿಲುಗಡೆಯಾದ ಪಾರ್ಕ್ ಟೌನ್‌ಗೆ ಮೊದಲು ರೈಲು ನಿಧಾನ ಗೊಳ್ಳುವುದನ್ನೇ ಕಾಯುತ್ತಿದ್ದರು. ರೈಲು ಪಾರ್ಕ್ ಟೌನ್ ನಿಲ್ದಾಣವನ್ನು ಪ್ರವೇಶಿಸುತ್ತಿದ್ದಂತೆ ಬೋಗಿಯಿಂದ ಪ್ಲಾಟ್‌ಫಾರ್ಮ್‌ಗೆ ಹಾರಿದ ಶಿವಾಜಿ ಮಿಂಚಿನ ವೇಗದಲ್ಲಿ ಓಡಿ ಮಹಿಳಾ ಬೋಗಿಯನ್ನು ಪ್ರವೇಶಿಸಿದ್ದರು. ಅಲ್ಲಿ 25ರ ಹರೆಯದ ಪಾತಕಿ ಮಹಿಳೆಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸುತ್ತಿದ್ದ. ತಕ್ಷಣ ಆತನನ್ನು ದೂರಕ್ಕೆ ತಳ್ಳಿ ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಈ ಈ ವೇಳೆ ರೈಲು ನಿಂತಿದ್ದು ಇತರ ಪೊಲೀಸರೂ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯ ದಾಳಿಯಿಂದ ಮಹಿಳೆ ಪ್ರಜ್ಞಾಶೂನ್ಯಳಾಗಿದ್ದು,ತುಟಿಗಳಿಂದ ರಕ್ತ ವಸರುತ್ತಿತ್ತು,ಬಟ್ಟೆಗಳು ಹರಿದಿದ್ದವು. ಪೊಲೀಸರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು,ಚಿಕಿತ್ಸೆಯ ಬಳಿಕ ಆಕೆ ಚೇತರಿಸಿಕೊಂಡಿದ್ದಾಳೆ.
ಈ ಸಾಹಸಕ್ಕಾಗಿ ಇಲಾಖೆಯು ಶಿವಾಜಿ ಮತ್ತವರ ತಂಡಕ್ಕೆ ನಗದು ಬಹುಮಾನವನ್ನು ಘೋಷಿಸಿದೆ.