ಮೊಬೈಲ್ ನಂಬರ್‌ಗೆ ಆಧಾರ್ ಜೋಡಣೆ ಪ್ರಶ್ನಿಸಿದ ಸುಪ್ರೀಂ
ಹೊಸದಿಲ್ಲಿ, ಎ.25: ಮೊಬೈಲ್ ನಂಬರ್‌ಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿರುವ ಸರಕಾರದ ಕ್ರಮವನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್, ತಾನು ಈ ಹಿಂದೆ ಬಳಕೆದಾರರ ದೃಢೀಕರಣದ ಬಗ್ಗೆ ನೀಡಿದ್ದ ಆದೇಶವನ್ನು ಸಾಧನವನ್ನಾಗಿ ಬಳಸಿಕೊಳ್ಳಲಾಗಿದೆ ಎಂದು ತಿಳಿಸಿತು.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರುಳ್ಳ ಸಾಂವಿಧಾನಿಕ ಪೀಠವು ಆಧಾರ್ ಕುರಿತು ಸಲ್ಲಿಸಲಾದ ಹಲವು ಅರ್ಜಿಗಳ ವಿಚಾರಣೆಯನ್ನು ನಡೆಸಿತು. ಈ ಹಿಂದೆ ‘ಲೋಕನೀತಿ ಫೌಂಡೇಷನ್’ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯ ವಿಚಾರಣೆ ಸಂದರ್ಭ ರಾಷ್ಟ್ರೀಯ ಭದ್ರತೆಯ ದೃಷ್ಟಿಯಲ್ಲಿ ಮೊಬೈಲ್ ಬಳಕೆದಾರರ ಪರಿಶೀಲನೆ ಅಗತ್ಯ ಎಂದು ತಾನು ಆದೇಶ ನೀಡಿರುವುದಾಗಿ ತಿಳಿಸಲಾಗಿದೆ. ಆದರೆ ಸುಪ್ರೀಂಕೋರ್ಟ್‌ನಿಂದ ಅಂತಹ ನಿರ್ದೇಶನ ಬಂದಿಲ್ಲ. ನೀವು ಇದನ್ನು ಮೊಬೈಲ್ ಬಳಕೆದಾರರಿಗೆ ಆಧಾರ್ ಕಡ್ಡಾಯಗೊಳಿಸಲು ಸಾಧನವನ್ನಾಗಿ ಬಳಸಿಕೊಂಡಿದ್ದೀರಿ ಎಂದು ನ್ಯಾಯಪೀಠ ತಿಳಿಸಿತು. ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ) ಪರ ವಾದ ಮಂಡಿಸಿದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ದೂರಸಂಪರ್ಕ ಇಲಾಖೆಯು ಇ-ಕೆವೈಸಿ ಪ್ರಕ್ರಿಯೆ ಬಳಸಿ ಮೊಬೈಲ್ ಸಂಖ್ಯೆಗಳ ಮರುಪರಿಶೀಲನೆ ನಡೆಸುವ ಬಗ್ಗೆ ಪ್ರಸ್ತಾವಿಸಿದೆ. ಅಲ್ಲದೆ ಟೆಲಿಗ್ರಾಫ್ ಕಾಯ್ದೆಯು ಸೇವೆಗಳನ್ನು ಒದಗಿಸುವವರ ಪರವಾನಿಗೆ ಷರತ್ತುಗಳ ಬಗ್ಗೆ ನಿರ್ಧರಿಸಲು ಸರಕಾರಕ್ಕೆ ಸಂಪೂರ್ಣ ಅಧಿಕಾರ ನೀಡಿದೆ ಎಂದು ತಿಳಿಸಿದರು.
ಆದರೆ ಪರವಾನಿಗೆ ಒಪ್ಪಂದ ಸರಕಾರ ಹಾಗೂ ಸೇವೆ ಒದಗಿಸುವ ಸಂಸ್ಥೆಗಳ ನಡುವೆ ನಡೆದಿದೆ. ನೀವು ಸೇವೆ ಪಡೆಯುವವರ (ಬಳಕೆದಾರರ) ಮೇಲೆ ಷರತ್ತುಗಳನ್ನು ವಿಧಿಸಲು ಹೇಗೆ ಸಾಧ್ಯ ಎಂದು ದೂರಸಂಪರ್ಕ ಇಲಾಖೆಯನ್ನು ಸಾಂವಿಧಾನಿಕ ಪೀಠ ಪ್ರಶ್ನಿಸಿತು. ಮೊಬೈಲ್ ಸಂಖ್ಯೆಯನ್ನು ಆಧಾರ್ ಜೊತೆ ಸಂಪರ್ಕಿಸುವ ನಿರ್ದೇಶನವನ್ನು ಟಿಆರ್‌ಎಐಯ ಶಿಫಾರಸಿನ ಮೇರೆಗೆ ಜಾರಿಗೊಳಿಸಲಾಗಿದೆ. ಅಲ್ಲದೆ ಯಾರು ಅರ್ಜಿ ಸಲ್ಲಿಸಿದ್ದಾರೆಯೋ ಅವರಿಗೆ ಮಾತ್ರ ಸಿಮ್‌ಕಾರ್ಡ್ ದೊರಕುವುದನ್ನು ಖಾತರಿ ಪಡಿಸುವ ಹೊಣೆ ಸರಕಾರಕ್ಕಿದೆ ಎಂದು ದ್ವಿವೇದಿ ಹೇಳಿದರು. ಟೆಲಿಗ್ರಾಫ್ ಕಾಯ್ದೆಯ ಸೆಕ್ಷನ್ 4ರ ಪ್ರಕಾರ ಆಧಾರ್ ಸಂಖ್ಯೆಯನ್ನು ಸಿಮ್‌ಗೆ ಜೋಡಿಸುವ ಆದೇಶ ಹೊರಡಿಸಲು ಸರಕಾರಕ್ಕೆ ಕಾನೂನು ಆಧಾರವಿದೆ ಎಂದ ದ್ವಿವೇದಿ, ಆಧಾರ್ ಯೋಜನೆಯನ್ನು ಅನ್ಯಾಯವಾಗಿ ಗುರಿಯಾಗಿಸಿಕೊಂಡು ಟೀಕಿಸಲಾಗುತ್ತಿದೆ. ಆದರೆ ಬ್ಯಾಂಕ್‌ಗಳು ಹಾಗೂ ಟೆಲಿಕಾಂ ಸಂಸ್ಥೆಗಳು ಮಾಹಿತಿ ಸಂಗ್ರಹಿಸುವ ಬಗ್ಗೆ ಯಾರೂ ಧ್ವನಿ ಎತ್ತುವುದಿಲ್ಲ ಎಂದು ದೂರಿದರು.
ಬ್ಯಾಂಕ್‌ನ ಕಾರ್ಡ್ ಬಳಸಿ ವ್ಯವಹಾರ ನಡೆಸಿದರೆ ತಾನು ಯಾವ ದಿನ, ಎಲ್ಲಿ, ಎಷ್ಟು ಮೊತ್ತದ ಸರಕುಗಳನ್ನು ಖರೀದಿಸಿದ್ದೇನೆ ಎಂಬ ಮಾಹಿತಿ ಬ್ಯಾಂಕ್‌ಗೆ ದೊರೆಯುತ್ತದೆ. ಇದೇ ರೀತಿ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಾಗುವ ಆ್ಯಪ್ ಒಂದರಲ್ಲಿ ವ್ಯಕ್ತಿಯೊಬ್ಬರ ಕುಟುಂಬ ಸದಸ್ಯರ ವಿವರ ಸಹಿತ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಇದನ್ನು ಯಾರೂ ಪ್ರಶ್ನಿಸುವುದಿಲ್ಲ ಯಾಕೆ ಎಂದು ಅವರು ಪ್ರಶ್ನಿಸಿದರು. ಆಧಾರ್ ಯೋಜನೆ ಸ್ಮಾರ್ಟ್‌ಕಾರ್ಡ್‌ಗಿಂತ ಸುರಕ್ಷಿತವಾಗಿದೆ. ಇಲ್ಲಿ ಮಾಹಿತಿಗಳನ್ನು ಗೂಢಲಿಪಿಯಲ್ಲಿ ಇರಿಸಲಾಗುತ್ತದೆ. ಅಲ್ಲದೆ ಅರ್ಜಿದಾರರು ದೂರುವಂತೆ ಆಧಾರ್ ಸಂಖ್ಯೆಯನ್ನು ಕಣ್ಗಾವಲು ನಡೆಸಲು ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಉಚ್ಛನ್ಯಾಯಾಲಯವು ಆಧಾರ್ ಕಾಯ್ದೆಯನ್ನು ಉಳಿಸಿ, ಸೂಕ್ತವಾಗಿ ಕಾರ್ಯನಿರ್ವಹಿಸಲು ಯಾವುದಾದರೂ ಕ್ರಮದ ಅಗತ್ಯವಿದ್ದರೆ ಸೂಚಿಸಬೇಕೆಂದು ಕೋರಿದರು.