ಟೊರಾಂಟೊ ದಾಳಿ: ಮಹಿಳೆಯರ ಬಗ್ಗೆ ಮುನಿಸು ಹೊಂದಿದ್ದ ಪಾತಕಿ
ಟೊರಾಂಟೊ, ಎ. 25: ಕೆನಡದ ನಗರ ಟೊರಾಂಟೊದ ಜನನಿಬಿಡ ರಸ್ತೆಯೊಂದರ ಪಾದಚಾರಿಗಳ ದಾರಿಯಲ್ಲಿ ವ್ಯಾನ್ ಹರಿಸಿ 10 ಮಂದಿಯ ಸಾವಿಗೆ ಕಾರಣನಾದ ವ್ಯಕ್ತಿಯ ವಿರುದ್ಧ ಮಂಗಳವಾರ ಕೊಲೆ ಆರೋಪವನ್ನು ಹೊರಿಸಲಾಗಿದೆ.
25 ವರ್ಷದ ಆರೋಪಿ ಅಲೆಕ್ ಮಿನಸಿಯನ್ ಮಹಿಳೆಯರ ವಿರುದ್ಧ ಮುನಿಸು ಹೊಂದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕಿಂತ ಮೊದಲು ಅವನು ಯಾವುದೇ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ದಾಳಿಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ. ಆತನ ದಾಳಿಯ ಸಂತ್ರಸ್ತರ ಪೈಕಿ ಹೆಚ್ಚಿನವರು ಮಹಿಳೆಯರು.
ದಾಳಿ ನಡೆಸುವ ಕೆಲವೇ ನಿಮಿಷಗಳ ಮೊದಲು ಆರೋಪಿಯು ಫೇಸ್‌ಬುಕ್‌ನಲ್ಲಿ ಸಂದೇಶವೊಂದನ್ನು ಹಾಕಿದ್ದನು. ಆ ಸಂದೇಶದಲ್ಲಿ ಅವನು ಅಮೆರಿಕದ ಸಾಮೂಹಿಕ ಹಂತಕ ಎಲಿಯಟ್ ರೋಜರ್‌ನನ್ನು ಹೊಗಳಿದ್ದನು. 22 ವರ್ಷದ ಎಲಿಯಟ್ 2014ರಲ್ಲಿ ಕ್ಯಾಲಿಫೋರ್ನಿಯದಲ್ಲಿ 6 ಮಂದಿಯನ್ನು ಹತ್ಯೆಗೈದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದನು.
ಟೊರಾಂಟೊ ದಾಳಿಯ ಸಂತ್ರಸ್ತರು ಮುಖ್ಯವಾಗಿ ಮಹಿಳೆಯರಾಗಿದ್ದರು ಹಾಗೂ ಮಹಿಳೆಯರಲ್ಲಿ 20ರಿಂದ 80 ವರ್ಷ ವಯಸ್ಸಿನವರಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.