ಉಳ್ಳಾಲ: ನೇತ್ರಾವತಿ ಸೇತುವೆ ಬಳಿ ನದಿಯಲ್ಲಿ ಮೃತದೇಹ ಪತ್ತೆ
Update: 2018-04-26 10:09 IST
ಉಳ್ಳಾಲ, ಎ.26: ನೇತ್ರಾವತಿ ಸೇತುವೆ ಬಳಿ ನದಿಯಲ್ಲಿ ಮೃತದೇಹವೊಂದು ತೇಲುತ್ತಿರುವುದು ಇಂದು ಬೆಳಗ್ಗೆ ಪತ್ತೆಯಾಗಿದೆ.
ನದಿಯಲ್ಲಿ ಮೃತದೇಹವೊಂದು ತೇಲುತ್ತಿರುವುದು ಸೇತುವೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಗಮನಿಸಿದ್ದಾರೆ. ತೇಲುತ್ತಿರುವುದು ಮೃತದೇಹ ಎಂಬುದು ದೃಢಪಟ್ಟಿದ್ದರೂ, ಅದು ಸ್ತ್ರೀ ಅಥವಾ ಪುರುಷನದ್ದೇ ಎಂದು ತಿಳಿದುಬಂದಿಲ್ಲ. ಮೃತದೇಹವನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ನಡುವೆ ಮೃತದೇಹ ತೇಲುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಕುತೂಹಲದಿಂದ ವಾಹನ ಪ್ರಯಾಣಿಕರು ಸೇತುವೆಯಲ್ಲಿ ವಾಹನಗಳನ್ನು ನಿಲ್ಲಿಸಿ ನದಿಗೆ ಇಣುಕಿ ನೋಡುತ್ತಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ಸುಗಮ ಸಂಚಾರಕ್ಕಾಗಿ ಟ್ರಾಫಿಕ್ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮೃತದೇಹ ಮೇಲೆತ್ತಲು ಕ್ರಮ ಕೈಗೊಳ್ಳುತ್ತಿದ್ದಾರೆ.