ತೊಕ್ಕೊಟ್ಟಿನಲ್ಲಿ ರಸ್ತೆ ಅಪಘಾತ: ಕುಂಪಲದ ಯುವಕ ಮೃತ್ಯು
Update: 2018-04-27 12:38 IST
ಮಂಗಳೂರು, ಎ.27: ಬೈಕಿಗೆ ಮರಳು ಸಾಗಾಟದ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಕುಂಪಲ ಆಶ್ರಯ ಕಾಲನಿ ನಿವಾಸಿ ವಿನೀತ್ ರಾಜ್(25) ಎಂದು ಗುರುತಿಸಲಾಗಿದೆ.
ತೊಕ್ಕೊಟ್ಟುವಿನಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಹೆಚ್ಚಿನ ಘನ ವಾಹನಗಳು ಇಲ್ಲಿನ ಬಸ್ ನಿಲ್ದಾಣದ ರಸ್ತೆಯಲ್ಲೇ ಸಂಚರಿಸುತ್ತಿವೆ. ಇದು ಅಪಾಯಕಾರಿಯಾಗಿ ಮಾರ್ಪಟ್ಟಿದೆ. ಇಂದು ನಡೆದ ಈ ಅಪಘಾತಕ್ಕೂ ಟಿಪ್ಪರ್ ಬಸ್ ನಿಲ್ದಾಣದ ರಸ್ತೆಯಲ್ಲಿ ಸಂಚರಿಸಿದ್ದೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.