ಭಾರತದ ಮುಂದಿನ ಸಿಲಿಕಾನ್ ವ್ಯಾಲಿಯಾಗಿ ಮಂಗಳೂರಿನ ಅಭಿವೃದ್ಧಿ!
ಮಂಗಳೂರು, ಎ.27: ಕಾಂಗ್ರೆಸ್‌ನಿಂದ ಇಂದು ಬಿಡುಗಡೆಗೊಂಡ ಪ್ರಣಾಳಿಕೆಯಲ್ಲಿ ವಿವಿಧ ಜಿಲ್ಲೆಗಳಿಗೆ ಸಂಬಂಧಿಸಿ ಪ್ರತ್ಯೇಕ ಪ್ರಣಾಳಿಕೆಗಳನ್ನು ಬಿಡುಗಡೆಗೊಳಿಸಲಾಯಿತು. ಅದರಂತೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಣಾಳಿಕೆಯಲ್ಲಿ ಮಂಗಳೂರನ್ನು ಭಾರತದ ಮುಂದಿನ ಸಿಲಿಕಾನ್ ವ್ಯಾಲಿಯಾಗಿ ಅಭಿವೃದ್ಧಿಪಡಿಸುವುದು ಹಾಗೂ ಕರ್ನಾಟಕದ ಬಿಪಿಒ ಹಬ್ ಆಗಿಸುವ ಭರವಸೆಯನ್ನು ನೀಡಲಾಗಿದೆ.
ದ.ಕ. ಜಿಲ್ಲೆಯಲ್ಲೂ ಮೂಲಭೂತ ಸೌಕರ್ಯ, ಕೈಗಾರಿಕಾ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ, ಉದ್ಯೋಗ ಮತ್ತು ಕೌಶಲ್ಯ, ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ, ನಗರ ಅಭಿವೃದ್ಧಿ ಮತ್ತು ಸಾರಿಗೆ, ಶಿಕ್ಷಣ, ಕಾನೂನು ಮತ್ತು ನ್ಯಾಯ, ಆಡಳಿತ, ಆರೋಗ್ಯ ಮತ್ತು ಪೌಷ್ಟಿಕತೆ ಮೊದಲಾದ ಕ್ಷೇತ್ರಗಳಲ್ಲಿ ಹಲವಾರು ಭರವಸೆಗಳನ್ನು ನೀಡಲಾಗಿದೆ.
# ದ.ಕ. ಜಿಲ್ಲಾ ಮಟ್ಟದ ಕಾಂಗ್ರೆಸ್ ಪ್ರಣಾಳಿಕೆಯ ಮುಖ್ಯಾಂಶಗಳು
*ಹುಬ್ಬಳ್ಳಿ ಮತ್ತು ಮಂಗಳೂರು ನಡುವೆ ವಿಮಾನಯಾನ ಸೌಲಭ್ಯ.
* ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ವಿಸ್ತರಣೆ.
* ಮಂಗಳೂರು ವಿಮಾನ ನಿಲ್ದಾಣದ ರನ್‌ವೇಯನ್ನು 2,450 ಮೀಟರ್‌ನಿಂದ 3,050 ಮೀಟರ್‌ಗಳಿಗೆ ವಿಸ್ತರಣೆ.
* ನವ ಮಂಗಳೂರು ಬಂದರು ಅಭಿವೃದ್ಧಿ.
* ಮಂಗಳೂರಿನಿಂದ ಮುಂಬೈಗೆ ರೈಲ್ವೆ ಹಳಿ ದ್ವಿಪಥಗೊಳಿಸುವುದು.
* ಜೋಕಟ್ಟೆ ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣದ ನಡುವೆ ಆರು ಪಥಗಳ ರಸ್ತೆ ನಿರ್ಮಾಣ.
* ಕ್ರೂಝ್ ಪ್ರವಾಸೋದ್ಯಮವನ್ನು ಸರಳಗೊಳಿಸುವುದು ಮತ್ತು ಲಕ್ಷದ್ವೀಪಕ್ಕೆ ಮರು ಸಂಪರ್ಕ ಒದಗಿಸುವುದು.
* ಐದು ಕೈಗಾರಿಕಾ ಪಾರ್ಕ್‌ಗಳ ನಿರ್ಮಾಣ- ಅವುಗಳೆಂದರೆ, ಪ್ಲಾಸ್ಟಕ್ ಇಂಡಸ್ಟ್ರಿ, ಮಹಿಳಾ ಉದ್ದಿಮೆದಾರರಿಗೆ ಬೆಂಬಲಿತ ಟೆಕ್ ಪಾರ್ಕ್, ಆಹಾರ ಸಂಸ್ಕರಣಾ ಪಾರ್ಕ್‌ಗಳು, ಅಟೊಮೊಬೈಲ್ ಟೆಕ್- ಪಾರ್ಕ್ ಮತ್ತು ಎಂಎಸ್‌ಎಂಇಗಳಿಗಾಗಿ 2,000 ಚದರ ಅಡಿಯ ಮಲ್ಟಿಲೆವಲ್ ಕೈಗಾರಿಕಾ ಕಾಂಪ್ಲೆಕ್ಸ್.
*ಸರ್ಫಿಂಗ್ ಬೀಚ್ ಆಗಿ ಸಸಿಹಿತ್ಲು ಬೀಚ್ ಅಭಿವೃದ್ಧಿ.
* ಪ್ರತ್ಯೇಕ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ರಚನೆ.
* ಮಂಗಳೂರಿನಲ್ಲಿ ಧಾರ್ಮಿಕ ಮತ್ತು ಆರೋಗ್ಯ ಪ್ರವಾಸೋದ್ಯಮಕ್ಕೆ ಉತ್ತೇಜನ.
* ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ.
* ಸಿಆರ್‌ಝೆಡ್ ಕೇಂದ್ರ ಕಚೇರಿ ಬೆಂಗಳೂರಿನಿಂದ ಮಂಗಳೂರಿಗೆ ಸ್ಥಳಾಂತರ.
* ಮಂಗಳೂರು, ಉಡುಪಿ ಮತ್ತು ಕಾರವಾರ ಜಿಲ್ಲೆಗಳಲ್ಲಿ ಬೀಚ್ ಪ್ರವಾಸೋದ್ಯಮ ಆರಂಭ.
* ಮಂಗಳೂರಿನಲ್ಲಿ ಬೈಕಂಪಾಡಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ (ಬಿಐಟಿಎ) ರಚನೆಗೆ ಒತ್ತು.
* ಮಂಗಳೂರು- ಕೊಣಾಜೆ ಮತ್ತು ಉಡುಪಿ ಶೈಕ್ಷಣಿಕ ಹಬ್ ಆಗಿ ರಚನೆ.
* ಜಿಲ್ಲೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ.
* ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪೊಲೀಸರ ಹೆಚ್ಚಳ.
* ಪ್ರತಿ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕಣ್ಗಾವಲು.
*ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತೇಜನ.
* ವಿವಿಧ ಶುಲ್ಕಗಳ ಪಾವತಿ, ಕಚೇರಿ ಸಂದರ್ಶನ ಬುಕ್ಕಿಂಗ್ ಮೊದಲಾದ ಸಾರ್ವಜನಿಕರ ಅಗತ್ಯಗಳನ್ನು ಪೂರೈಸಲು ಮೊಬೈಲ್ ಆಧಾರಿತ ಅಪ್ಲಿಕೇಶನ್ ಮೂಲಕ ಜಾಗೃತಿ.
* ಇಲೆಕ್ಟ್ರಾನಿಕ್ ಸೇವೆಗಳು, ಸೇವೆಯ ಹಕ್ಕು ಅನುಷ್ಠಾನ ಮತ್ತು ಇಲೆಕ್ಟ್ರಾನಿಕ್ ಸೇವೆಗಳನ್ನು ಬಳಕೆ ಮಾಡಲು ಸರಕಾರಿ ನೌಕರರಿಗೆ ತರಬೇತಿ.
* ಇ- ಆಡಳಿತಕ್ಕೆ ಮತ್ತಷ್ಟು ಒತ್ತು ನೀಡಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸುವ ಸಲುವಾಗಿ ಪ್ರತಿಯೊಂದು ಕಚೇರಿಯು ಅಂತರ್ಜಾಲ ಸೌಲಭ್ಯವನ್ನು ಹೊಂದುವುದು ಮತ್ತು ನಾಗರಿಕರ ಬೆರಳತುದಿಯಲ್ಲಿ ಮಾಹಿತಿಗಳು ಲಭ್ಯವಾಗುವಂತೆ ಮಾಡುವುದು.
* ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ರೋಗಿಗಳ ಅನುಪಾತವನ್ನು ಸುಧಾರಿಸುವುದು.
* ವಿಕಚಲೇತನರು, ನಿರಾಶ್ರಿತರು ಮತ್ತು ಮಕ್ಕಳಿಗಾಗಿ ವಿಶೇಷ ನಿಗಾ ಕೇಂದ್ರಗಳು.
* ಅಮಲು ವ್ಯಸನ ಮುಕ್ತ ಕೇಂದ್ರಗಳ ಸ್ಥಾಪನೆ.
* ಆಸ್ಪತ್ರೆಗಳಲ್ಲಿ 24x7 ವೈದ್ಯರ ಲಭ್ಯತೆ.