×
Ad

ಉಡುಪಿ ಜಿಲ್ಲೆಯಲ್ಲಿ 1,103 ಮತಗಟ್ಟೆಗಳು, 1,437 ಇವಿಎಂಗಳು

Update: 2018-04-27 19:45 IST

ಮಣಿಪಾಲ, ಎ.27: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಉಡುಪಿ ಜಿಲ್ಲೆಯ ಮತಗಟ್ಟೆಗಳ ಸಂಖ್ಯೆ 25 ಹೆಚ್ಚಾಗಿದ್ದು, ಒಟ್ಟು 1,103 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಬೈಂದೂರಿನಲ್ಲಿ 246, ಕುಂದಾಪುರ 218, ಉಡುಪಿ 225, ಕಾಪು 207 ಹಾಗೂ ಕಾರ್ಕಳದಲ್ಲಿ 207 ಮತಗಟ್ಟೆಗಳಿರುತ್ತವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ 1,103 ಮತಗಟ್ಟೆಗಳಲ್ಲಿ 221 ಮತಗಟ್ಟೆಗಳನ್ನು ಸೂಕ್ಷ್ಮ (ಕ್ರಿಟಿಕಲ್) ಮತಗಟ್ಟೆಗಳೆಂದು ಗುರುತಿಸಲಾಗಿದೆ. ಉಳಿದ 882 ಮತಗಟ್ಟೆಗಳು ಸಾಮಾನ್ಯ ಮತೆಗಟ್ಟೆಗಳಾಗಿರುತ್ತವೆ ಎಂದವರು ವಿವರಿಸಿದರು.

ಉಡುಪಿ ಜಿಲ್ಲೆಗೆ ಒಟ್ಟು 1,437 ಮತಯಂತ್ರಗಳನ್ನು (ಇವಿಎಂ), 1,315 ಕಂಟ್ರೋಲ್ ಯುನಿಟ್ ಹಾಗೂ 1,381 ವಿವಿಪ್ಯಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಪ್ರತೀ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿರುವ ಇವುಗಳ ವಿವರ ಹೀಗಿದೆ. ಬೈಂದೂರು: 320- 293- 308, ಕುಂದಾಪುರ: 284- 260- 273, ಉಡುಪಿ: 293- 268- 282, ಕಾಪು: 270- 247- 259, ಕಾರ್ಕಳ: 270- 247- 259.

ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇವಿಎಂ ಹಾಗೂ ವಿವಿಪ್ಯಾಟ್‌ಗಳ ಪ್ರಥಮ ಹಂತದ ರ್ಯಾಂಡಮೈಸೇಶನ್ ಕಾರ್ಯವು ಎಲ್ಲಾ ರಾಜಕೀಯ ಪಕ್ಷಗಳ ಸಮಕ್ಷಮದಲ್ಲಿ ಎ.24ರಂದು ನಡೆದಿದೆ. ಅವುಗಳನ್ನು ಜಿಲ್ಲಾ ಭದ್ರತಾ ಕೊಠಡಿಗಳಿಂದ ವಿಧಾನಸಭಾ ಕ್ಷೇತ್ರಗಳ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ. ಇವಿಎಂ ಹಾಗೂ ವಿವಿಪ್ಯಾಟ್‌ಗಳ ಎರಡನೇ ಹಂತದ ಮತಗಟ್ಟೆವಾರು ಹಂಚಿಕೆಯ ರ್ಯಾಂಡಮೈಸೇಶನ್ ಕಾರ್ಯವು ಎ.28ರಂದು ಚುನಾವಣಾ ಸಾಮಾನ್ಯ ವೀಕ್ಷಕರು ಹಾಗೂ ರಾಜಕೀಯ ಪಕ್ಷಗಳ ಸಮಕ್ಷಮ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ ಎಂದವರು ತಿಳಿಸಿದರು.

ಪರಿಶೀಲನೆಯ ವೇಳೆ ಬೈಂದೂರು ಕ್ಷೇತ್ರದ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆಯಲ್ಲಿ ಕೊರತೆ ಕಂಡುಬಂದಿದೆ. ಇದಕ್ಕಾಗಿ ಪ್ರತಿ ಮತಗಟ್ಟೆಗೆ ಸಿಬ್ಬಂದಿಯನ್ನು ಕರೆದೊಯ್ಯುವ ವಾಹನಗಳನ್ನು ದೂರದಿಂದ ಜನರನ್ನು ಮತದಾನಕ್ಕೆ ಕರೆತರಲು ಬಳಸುವಂತೆ ಸೂಚನೆಗಳನ್ನು ನೀಡಲಾಗಿದೆ. ಅಲ್ಲದೇ ಸಂಪರ್ಕ ವ್ಯವಸ್ಥೆ ಸರಿ ಇಲ್ಲದ ಕಡೆ, ಖಾಸಗಿಯವರಿಗೂ ಮನವಿ ಮಾಡಲು ಸೂಚಿಸಲಾಗಿದೆ ಎಂದರು.

ಪೆಯ್ಡ್ ನ್ಯೂಸ್‌ಗೆ ನೋಟಿಸ್: ಚುನಾವಣೆಗೆ ಸಂಬಂಧಿಸಿದಂತೆ ದೃಶ್ಯ ಮಾದ್ಯಮ ಹಾಗೂ ಪ್ರಿಂಟ್ ಮಾಧ್ಯಮಗಳಲ್ಲಿ ಬರುತ್ತಿರುವ ಎಲ್ಲ ವರದಿಗಳನ್ನು ಗಮನಿಸಲಾಗುತ್ತಿದೆ. ಕುಂದಾಪುರದ ಸ್ಥಳೀಯ ಚಾನೆಲ್ ಒಂದರಲ್ಲಿ ಒಂದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದಂತೆ ವರದಿಗಳು ಪ್ರಸಾರಗೊಳ್ಳುತ್ತಿದ್ದು, ಅವುಗಳನ್ನು ಪೆಯ್ಡ್ ನ್ಯೂಸ್ ಎಂದು ಪರಿಗಣಿಸಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದರು.

 92.82 ಲಕ್ಷ ರೂ. ನಗದು ವಶ: ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಬಳಿಕ ದಾಖಲೆಗಳಿಲ್ಲದೇ ಸಾಗಿಸಲಾಗುತ್ತಿದ್ದ ಒಟ್ಟು 92,82,130 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ದಾಖಲೆಗಳನ್ನು ಸಲ್ಲಿಸಿದ 13,75,750 ರೂ.ಗಳನ್ನು ತನಿಖೆಯ ಬಳಿಕ ಹಿಂದಿರುಗಿಸಲಾಗಿದೆ ಎಂದು ಪ್ರಿಯಾಂಕಾ ಮೇರಿ ತಿಳಿಸಿದರು.

ಬೈಂದೂರು ಕ್ಷೇತ್ರದಲ್ಲಿ 70,04,750 ರೂ. (4,45,340ರೂ. ಹಿಂದಕ್ಕೆ), ಕುಂದಾಪುರದಲ್ಲಿ 7,20,310 (7,20,310), ಉಡುಪಿಯಲ್ಲಿ 59,000 (59,000), ಕಾಪುವಿನಲ್ಲಿ 14,98,070 ರೂ. (1,51,100) ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ 47,04,494 ರೂ. ವೌಲ್ಯದ 9,970.940 ಐಎಂಎಲ್ ಅಕ್ರಮ ಮದ್ಯ, 2045 ರೂ. ಮೌಲ್ಯದ ಗೋವಾ ಮದ್ಯ, 5,12,181ರೂ. ಮೌಲ್ಯದ 3116.030ಎಂಎಲ್ ಬೀರ್, 675 ರೂ. ಮೌಲ್ಯದ 13.500 ಎಂಎಲ್ ಸೇಂದಿ ಹಾಗೂ ಒಂದು ಮಾರುತಿ ಆಲ್ಟೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ 27 ಮದ್ಯದಂಗಡಿಗಳ ಪರವಾನಿಗೆಯನ್ನು ಅಮಾನತುಗೊಳಿಸಲಾಗಿದೆ ಎಂದರು.

ಅಲ್ಲದೇ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಬಗ್ಗೆ ಒಟ್ಟು 27 ಪ್ರಕರಣಗಳನ್ನು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಅನುರಾಧಾ ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News