×
Ad

ಸಚಿವ ಪ್ರಮೋದ್ ವಿರುದ್ಧ ಸುಳ್ಳು ಆರೋಪ: ಟಿ.ಜೆ.ಅಬ್ರಹಾಂಗೆ ಕೋರ್ಟ್ ಸಮನ್ಸ್

Update: 2018-04-27 20:47 IST

ಉಡುಪಿ, ಎ.27: ರಾಜ್ಯ ಸಚಿವ ಹಾಗೂ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಅವರು ಉಡುಪಿ ನ್ಯಾಯಾಲಯದಲ್ಲಿ ಆರ್‌ಟಿಐ ಕಾರ್ಯಕರ್ತ ಟಿ.ಜೆ.ಅಬ್ರಹಾಂ ವಿರುದ್ಧ ಸಲ್ಲಿಸಿದ ಖಾಸಗಿ ಕ್ರಿಮಿನಲ್ ಫಿರ್ಯಾದಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ವಿಚಾರಣೆಗೆ ಹಾಜರಾಗುವಂತೆ ಅಬ್ರಹಾಂಗೆ ಸಮನ್ಸ್ ಜಾರಿಗೆ ಆದೇಶ ನೀಡಿದೆ ಎಂದು ಸಚಿವರ ಪರವಾಗಿ ದಾವೆ ಹೂಡಿರುವ ಉಡುಪಿಯ ಹಿರಿಯ ನ್ಯಾಯವಾದಿ ಎಂ.ಶಾಂತಾರಾಮ ಶೆಟ್ಟಿ ತಿಳಿಸಿದ್ದಾರೆ.

ಟಿ.ಜೆ.ಅಬ್ರಹಾಂ ಇತ್ತೀಚೆಗೆ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಸಚಿವರು 1.1 ಕೋಟಿ ರೂ. ವೌಲ್ಯದ ಆಸ್ತಿಗೆ 193 ಕೋ.ರೂ. ಸಾಲ ಪಡೆದು ಅಕ್ರಮ ಎಸಗಿದ್ದಾರೆ ಹಾಗೂ ಬ್ಯಾಂಕಿನವರೊಂದಿಗೆ ಶಾಮೀಲಾಗಿ ಮೋಸ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಈ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಮುಖ್ಯಸ್ಥರಿಗೆ ದೂರು ನೀಡಿದ್ದಾಗಿ ಮಾನಹಾನಿಕರ ಹೇಳಿಕೆ ನೀಡಿದ್ದರು. ಇದು ಮರುದಿನದ ಪತ್ರಿಕೆಗಳಲ್ಲಿ ಪ್ರಕಟಗೊಂಡು ಸಾರ್ವಜನಿಕರೆದುರು ಸಚಿವರ ತೇಜೋವಧೆ ಹಾಗೂ ಮಾನನಷ್ಟವಾಗುವಂತೆ ಮಾಡಿ ಭಾರತೀಯ ದಂಡ ಸಂಹಿತೆಯ ಕಲಂ 500, 501, 109ರ ಪ್ರಕಾರ ತಪ್ಪೆಸಗಿದ್ದಾರೆ ಎಂದು ಉಡುಪಿಯ ಒಂದನೇ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ದಲ್ಲಿ ಖಾಸಗಿ ದೂರು ಸಲ್ಲಿಸಲಾಗಿತ್ತು.

ಈ ಬಗ್ಗೆ ದೂರುದಾರ ಪ್ರಮೋದ್ ಮಧ್ವರಾಜ್ ನ್ಯಾಯಾಲಯದ ಮುಂದೆ ಪ್ರಮಾಣೀಕೃತ ಹೇಳಿಕೆ ನೀಡಿದ್ದು, ಉಡುಪಿ ಉದ್ಯಮಿ ಉಲ್ಲಾಸ್ ಭಟ್ ಪೂರಕ ಸಾಕ್ಷಿ ನೀಡಿದ್ದಾರೆ.

ಈ ಪ್ರಕರಣದಲ್ಲಿ ಅಬ್ರಹಾಂ ಸಚಿವರ ವಿರುದ್ಧ ಸುಳ್ಳು ಹಾಗೂ ಮಾನಹಾನಿಕರ ಹೇಳಿಕೆಯನ್ನು ನೀಡಿ ಭಾರತೀಯ ದಂಡಸಂಹಿತೆಯ ಕಲಂ 500ರ ಅಡಿ ಅಪರಾಧ, ಹೇಳಿಕೆಗಳು ವಿವಿಧ ಮಾಧ್ಯಮಗಳಲ್ಲಿ ಪ್ರಸಾರ-ಪ್ರಕಟಗೊಳ್ಳುವಂತೆ ಪ್ರಚೋದಿಸಿ ಕಲಂ 501 ಹಾಗೂ 109ರ ಅಡಿ ಅಪರಾಧಗಳ ಬಗ್ಗೆ ವಿಚಾರಣೆ ಎದುರಿಸಲು ಮೇಲ್ನೋಟಕ್ಕೆ ಅಂಶಗಳು ಕಂಡ ಬಂದ ಕಾರಣ ನ್ಯಾಯಾಧೀಶ ಮಂಜುನಾಥ ಎಂ.ಎಸ್., ವಿಚಾರಣೆಗಾಗಿ ಜು.5ರಂದು ನ್ಯಾಯಾಲಯದಲ್ಲಿ ಹಾಜರಾಗುವಂತೆ ಅಬ್ರಹಾಂಗೆ ಆದೇಶ ನೀಡಿದ್ದಾರೆ ಎಂದು ಶಾಂತಾರಾಮ್ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News