×
Ad

ಉಡುಪಿ: ಸರಕಾರಿ ಬಸ್‌ಗಳ ಟಿಕೆಟ್‌ನಲ್ಲೂ ಮತದಾನ ಜಾಗೃತಿ!

Update: 2018-04-27 20:54 IST

ಉಡುಪಿ, ಎ.27: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತ ದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯ ಜೊತೆ ಸರಕಾರಿ ಬಸ್‌ಗಳ ಸಿಬ್ಬಂದಿ ಕೂಡ ಕೈಜೋಡಿಸಿದ್ದಾರೆ. ಸರಕಾರಿ ಬಸ್‌ಗಳ ಪ್ರಯಾಣಿಕರಿಗೆ ನೀಡುವ ಟಿಕೆಟ್‌ಗಳ ಮೂಲಕವೂ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ.

ಜಿಲ್ಲಾ ಸ್ವೀಪ್ ಸಮಿತಿಯ ಸೂಚನೆಯಂತೆ ಎ.24ರಿಂದ ಉಡುಪಿಯ ಕೆಎಸ್ಸಾರ್ಟಿಸಿ ಡೀಪೊದಿಂದ ಹೊರಡುವ 95 ಕೆಎಸ್ಸಾರ್ಟಿಸಿ ಬಸ್‌ಗಳು ಮತ್ತು 43 ನಗರ ಸಾರಿಗೆ ಬಸ್‌ಗಳ ಟಿಕೆಟ್‌ಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಬರಹವನ್ನು ಮುದ್ರಿಸಿ ಪ್ರಯಾಣಿಕರಿಗೆ ನೀಡಲಾಗುತ್ತಿದೆ.

 ಸರಕಾರಿ ಬಸ್‌ಗಳ ಟಿಕೆಟ್ ಯಂತ್ರದ ಸಾಫ್ಟ್‌ವೇರ್‌ನಲ್ಲಿ ‘ಮೇ 12ರಂದು ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ’ ಎಂಬ ಜಾಗೃತಿ ಬರಹವನ್ನು ಅಪ್‌ಡೇಟ್ ಮಾಡಲಾಗಿದ್ದು, ಟಿಕೆಟ್ ನೀಡುವಾಗ ಈ ಬರಹ ಟಿಕೆಟ್‌ನಲ್ಲಿ ಮುದ್ರಣಗೊಂಡು ಪ್ರಯಾಣಿಕರ ಕೈ ಸೇರುತ್ತಿದೆ. ಹೀಗೆ ಪ್ರತಿದಿನ ಸಾವಿರಾರು ಪ್ರಯಾಣಿಕರಿಗೆ ಮತದಾನದ ಜಾಗೃತಿ ಮೂಡಿಸುವ ಕಾರ್ಯವನ್ನು ಕೆಎಸ್ಸಾರ್ಟಿಸಿ ಸಿಬ್ಬಂದಿ ಮಾಡುತ್ತಿದ್ದಾರೆ.

ಅದೇ ರೀತಿ ಸ್ವೀಪ್ ಸಮಿತಿಯು ಎಲ್ಲ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಮತ ದಾನ ಜಾಗೃತಿಯ ಸ್ಟಿಕ್ಕರ್‌ಗಳನ್ನು ಅಂಟಿಸಿ ಮತದಾನ ಮಾಡುವಂತೆ ಪ್ರಯಾಣಿಕರನ್ನು ಪ್ರೇರೆಪಿಸುತ್ತಿದೆ. ಇದಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಿಬ್ಬಂದಿ ಕೂಡ ಸಹಕಾರ ನೀಡುತ್ತಿದ್ದಾರೆ.

‘ಉಡುಪಿ ಡೀಪೊದಿಂದ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ಸಂಚರಿಸುವ ಎಲ್ಲ ಬಸ್‌ಗಳಲ್ಲಿ ಮತ್ತು ನಗರ ಸಾರಿಗೆ ಬಸ್‌ಗಳ ಟಿಕೆಟ್‌ಗಳಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ದಿನವೊಂದಕ್ಕೆ ನಗರ ಸಾರಿಗೆಯ ಒಂದು ಬಸ್ಸಿನಲ್ಲಿ 800ರಿಂದ 900 ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇವರೆಲ್ಲರಿಗೂ ಟಿಕೆಟ್ ನೀಡುವುದರಿಂದ ಪ್ರತಿದಿನ ಸಾವಿರಾರು ಮಂದಿಯಲ್ಲಿ ಮತದಾನದ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಕೆಎಸ್ಸಾರ್ಟಿಸಿ ಉಡುಪಿ ಡೀಪೊ ಮ್ಯಾನೇಜರ್ ಉದಯ ಶೆಟ್ಟಿ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.


 ‘ರಾಜ್ಯದ ಎಲ್ಲ ಕಡೆಗಳಂತೆ ಉಡುಪಿಯಲ್ಲೂ ಕೆಎಸ್ಸಾರ್ಟಿಸಿ ಬಸ್‌ಗಳ ಟಿಕೆಟ್‌ಗಳಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಖಾಸಗಿ ಬಸ್‌ಗಳ ಮಾಲಕರಲ್ಲೂ ಮನವಿ ಮಾಡಿದ್ದೆವು. ಆದರೆ ಸಾಫ್ಟ್‌ವೇರ್ ಸಮಸ್ಯೆಯಿಂದ ಅದು ಸಾಧ್ಯವಾಗಿಲ್ಲ’ ಎಂದು ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸಿಇಒ ಶಿವಾನಂದ ಕಾಪಶಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News