ಬಾಲಕಿಯ ಕಾಲನ್ನು ತಿರುಗಿಸಿ ಜೋಡಿಸಿದ ವೈದ್ಯರು: ಕಾರಣವೇನು ಗೊತ್ತಾ?

Update: 2018-04-27 16:18 GMT

ಬರ್ಮಿಂಗ್‍ಹ್ಯಾಮ್, ಎ.27: ಇಲ್ಲಿನ ರಾಯಲ್ ಆರ್ಥೋಪೀಡಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟ್ಯಾಮ್‍ವರ್ತ್ ನಿವಾಸಿ, ಏಳು ವರ್ಷದ  ಅಮೇಲಿಯಾ ಎಲ್‍ಡ್ರೆಡ್ ಎಂಬ ಬಾಲಕಿಗೆ  ವಿಶೇಷ ಶಸ್ತ್ರಕ್ರಿಯೆ  ನಡೆಸಿರುವ ವೈದ್ಯರು ಆಕೆಯ ಎಡಗಾಲನ್ನು ಪಾದವು ಹಿಂದಕ್ಕೆ ಇರುವಂತೆ ಜೋಡಿಸಿದ್ದಾರೆ.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಎಮೇಲಿಯಾಳ ಎಡಗಾಲು ಅಪರೂಪದ ಒಸ್ಟೋಸಾರ್ಕೋಮಾ ಕಾಯಿಲೆಗೆ ತುತ್ತಾಗಿತ್ತು. ಆಕೆಗೆ ಕಿಮೋಥೆರಪಿ ಚಿಕಿತ್ಸೆ ನೀಡಿದ ನಂತರ ಆಕೆಯ ಎಡಗಾಲನ್ನು ಶಸ್ತ್ರಕ್ರಿಯೆಯ ಮೂಲಕ ಕತ್ತರಿಸಲು ವೈದ್ಯರು ನಿರ್ಧರಿಸಿದ್ದರು. ಆದರೆ ರೊಟೇಶನ್ ಪ್ಲಾಸ್ಟಿ ಎಂಬ ಈ ವಿಶೇಷ ಪ್ರಕ್ರಿಯೆಯನ್ವಯ ಕ್ಯಾನ್ಸರ್ ನಿಂದ ಬಾಧಿತವಾಗಿರುವ ಕಾಲಿನ ಭಾಗವನ್ನು ತೆಗೆದು ಉಳಿದ ಭಾಗವನ್ನು ತಿರುಗಾಮುರುಗಾ ಮರುಜೋಡಿಸಲಾಗುತ್ತದೆ. ಇದರಿಂದ ರೋಗಿಯ ಮೊಣಕಾಲ ಗಂಟು ಸಾಮಾನ್ಯ ಸ್ಥಿತಿಯಲ್ಲಿರುತ್ತದೆಯಲ್ಲದೆ ಆಕೆ ಅತ್ತಿತ್ತ ಓಡಾಡಬಹುದು ಹಾಗೂ ಜಿಗಿಯಬಹುದಾಗಿದೆ. ಈ ಪ್ರಕ್ರಿಯೆಯಿಂದಾಗಿ ಆಕೆಯ ಪೃಷ್ಠದ ಭಾಗದಿಂದಲೇ ಕಾಲನ್ನು ಕತ್ತರಿಸುವುದು ತಪ್ಪುತ್ತದೆ.

ಆತ್ಮವಿಶ್ವಾಸದ ಪ್ರತೀಕದಂತಿರುವ ಈ ಬಾಲಕಿಯ ಬೆನ್ನೆಲುಬಾಗಿ ಆಕೆಯ ಕುಟುಂಬ ವರ್ಗ ಮತ್ತು ಸ್ನೇಹಿತರು ನಿಂತಿದ್ದಾರೆ. ಆಕೆಗೆ ಶಸ್ತ್ರಕ್ರಿಯೆ ನಡೆಸಿದ ಪ್ರೊಫೆಸರ್ ಲೀ ಜೇಸ್ ಕೂಡ ಆಕೆಯ ಆರೋಗ್ಯ ಸುಧಾರಿಸಿರುವುದನ್ನು ಕಂಡು ಸಮಾಧಾನ ಹೊಂದಿದ್ದಾರಲ್ಲದೆ ಆಕೆಯ ಧೈರ್ಯವನ್ನು ಮೆಚ್ಚಿದ್ದಾರೆ. ಸಾಮಾನ್ಯ ಮಕ್ಕಳಂತೆ ಆಕೆ ಎಲ್ಲಾ ಕಾರ್ಯಚಟುವಟಿಕೆಗಳಲ್ಲೂ ಭಾಗವಹಿಸಬಹುದೆಂದೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News