ಶಾಸಕ ಲೋಬೊರ ಆಸ್ತಿ ಹೆಚ್ಚಾಗಿರುವುದೇ ಸಾಧನೆ: ಸುನೀಲ್ ಕುಮಾರ್ ಬಜಾಲ್ ಆರೋಪ
ಮಂಗಳೂರು, ಎ.27: ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಜೆ.ಆರ್.ಲೋಬೋರ ಬಳಿಯಿದ್ದ ಆಸ್ತಿಯು ಈ ಚುನಾವಣೆಯ ಸಂದರ್ಭ ಎರಡುಪಟ್ಟು ಜಾಸ್ತಿಯಾಗಿದೆ. ಹಾಗಾಗಿ ಶಾಸಕರು ಮಂಗಳೂರನ್ನು ಅಭಿವೃದ್ಧಿ ಮಾಡುವ ಬದಲು ತಾವೇ ಅಭಿವೃದ್ಧಿಯಾಗಿರುವುದು ಇವರ ಸಾಧನೆಯಾಗಿದೆ ಎಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ಹೇಳಿದರು.
ನಗರದ ಬಿಕರ್ನಕಟ್ಟೆಯಲ್ಲಿ ನಡೆದ ಸಿಪಿಎಂ ಪಕ್ಷದ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಂಗಳೂರಿನ ಅಭಿವೃದ್ದಿಗೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಎಡಿಬಿ ಯೋಜನೆಯ ಮೂಲಕ 740 ಕೋಟಿ ಸಾವಿರ ರೂಪಾಯಿಗಳನ್ನು ಸಾಲದ ರೂಪದಲ್ಲಿ ತಂದರೂ ಸಮರ್ಪಕ ಕಾರ್ಯ ಮಾಡದೆ ಭ್ರಷ್ಟಾಚಾರ ನಡೆಸಿದ್ದಾರೆ. ನಗರದ ಜನತೆ ಎಡಿಬಿ ಸಾಲವನ್ನು ಸ್ವಯಂ ಘೋಷಿತ ಆಸ್ತಿ ತೆರಿಗೆಯ ಮೂಲಕ ಈವತ್ತಿಗೂ ಕಟ್ಟುತ್ತಿದ್ದಾರೆ. ಅಲ್ಲದೆ ಜನರ ಮೂಲಭೂತ ಸೌಕರ್ಯಗಳನ್ನು ಈವರೆಗೂ ಶಾಸಕರು ಒದಗಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ಬದಲಾಗಿ ಜನರ ಹಣವನ್ನೂ ಲೂಟಿ ಮಾಡಿ ತಮ್ಮ ಆಸ್ತಿಯನ್ನು ಹೆಚ್ಚಿಸುವ ಮೂಲಕ ಕ್ಷೇತ್ರದ ಜನರಿಗೆ ಅನ್ಯಾಯ ಎಸಗಿದ್ದಾರೆ ಎಂದು ಸುನೀಲ್ ಕುಮಾರ್ ಬಜಾಲ್ ಆರೋಪಿಸಿದರು.
ಸಭೆಯಲ್ಲಿ ಚುನಾವಣೆ ಸಮಿತಿಯ ಮುಖಂಡರಾದ ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಸಂತೋಷ್ ಶಕ್ತಿನಗರ, ಸಿಐಟಿಯು ಮುಖಂಡ ಬಾಬು ದೇವಾಡಿಗ ಉಪಸ್ಥಿತರಿದ್ದರು.
ಲಿಂಗಪ್ಪನಂತೂರು ಸ್ವಾಗತಿಸಿದರು. ವಾಸುದೇವ ಜೆ.ಪಿ. ವಂದಿಸಿದರು.