ಫೇಸ್‌ಬುಕ್ ಬಳಕೆದಾರರೇ ಹುಷಾರ್... ಕಾದಿದೆ ಮತ್ತಷ್ಟು ಮಾಹಿತಿ ಸೋರಿಕೆ

Update: 2018-04-28 03:46 GMT

ಸ್ಯಾನ್‌ಫ್ರಾನ್ಸಿಸ್ಕೊ, ಎ.28: ಕ್ಯಾಂಬ್ರಿಡ್ಜ್- ಅನಲೈಟಿಕಾ ಗಾತ್ರದ ಮತ್ತೊಂದು ದೊಡ್ಡ ಮಾಹಿತಿ ಸೋರಿಕೆ ಪ್ರಕರಣವನ್ನು ಬೇಧಿಸುವಲ್ಲಿ ಫೇಸ್‌ಬುಕ್ ನಿರತವಾಗಿದೆ. ಈ ಹಿನ್ನೆಲೆಯಲ್ಲಿ ಬಳಕೆದಾರರು ಮತ್ತು ಹೂಡಿಕೆದಾರರಿಗೆ ಮಾಹಿತಿ ಸೋರಿಕೆ ಎಚ್ಚರಿಕೆ ನೀಡಿದೆ.

ಅಮೆರಿಕದ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಕಮಿಷನ್ ಜತೆ ತನ್ನ ತ್ರೈಮಾಸಿಕ ವರದಿಯನ್ನು ಹಂಚಿಕೊಂಡಿರುವ ಫೇಸ್‌ಬುಕ್, ಕ್ಯಾಂಬ್ರಿಡ್ಜ್ ಅನಲೈಟಿಕಾವನ್ನು ಹೆಸರಿಸದೇ, "ಬಳಕೆದಾರರ ಮಾಹಿತಿಯ ದುರ್ಬಳಕೆ ನಿದರ್ಶನಗಳನ್ನು ಮತ್ತು ಬಾಹ್ಯ ಸಂಸ್ಥೆಯ ಅನಪೇಕ್ಷಿತ ಚಟುವಟಿಕೆಗಳನ್ನು ಪತ್ತೆ ಮಾಡಿ ಸದ್ಯದಲ್ಲೇ ಬಹಿರಂಗಪಡಿಸಲಾಗುವುದು" ಎಂದು ವಿವರಿಸಿದೆ.

ಮಾಧ್ಯಮ ಅಥವಾ ಬಾಹ್ಯ ಸಂಸ್ಥೆಗಳ ಮೂಲಕ ಇಂಥ ಘಟನೆಗಳನ್ನು ಅಥವಾ ಚಟುವಟಿಕೆಗಳನ್ನು ಪ್ರಕಟಿಸಲಿದ್ದೇವೆ. ಬಳಕೆದಾರರ ವಿಶ್ವಾಸ ಮತ್ತು ತೊಡಗುವಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರುವ, ನಮ್ಮ ಅಥವಾ ಬ್ರಾಂಡ್ ಗೌರವಕ್ಕೆ ಹಾನಿಯಾಗುವ ಅಥವಾ ನಮ್ಮ ವಹಿವಾಟು ಹಾಗೂ ಹಣಕಾಸು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಂಶಗಳನ್ನು ಪತ್ತೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದೆ.

ಇದು ಹೆಚ್ಚಿನ ಪ್ರಮಾಣದ ನಿಯಂತ್ರಕ ಅಪಾಯ ಸಾಧ್ಯತೆಯನ್ನು ಬಹಿರಂಗಗೊಳಿಸಲು ಇದು ನೆರವಾಗಲಿದೆ ಎಂದು ಹೇಳಿದ್ದಾರೆ. ತಮ್ಮ ವೈಯಕ್ತಿಕ ಮಾಹಿತಿಗಳೂ ಸೇರಿದಂತೆ 87 ದಶಲಕ್ಷ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಬ್ರಿಟಿಷ್‌ನ ರಾಜಕೀಯ ಸಲಹಾ ಸಂಸ್ಥೆ ಅಸಮರ್ಪಕವಾಗಿ ಬಹಿರಂಗಪಡಿಸಿದೆ ಎಂದು ಸಿಇಓ ಮಾರ್ಕ್ ಝುಕರ್‌ಬರ್ಗ್ ಅಮೆರಿಕ ಕಾಂಗ್ರೆಸ್‌ನಲ್ಲಿ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News