×
Ad

ಪಕ್ಷ ವಿರೋಧಿ ಚಟುವಟಿಕೆ: ದ.ಕ. ಜಿಲ್ಲೆಯ ಇಬ್ಬರು ಜೆಡಿಎಸ್ ಮುಖಂಡರ ಉಚ್ಚಾಟನೆ

Update: 2018-04-28 17:28 IST

ಮಂಗಳೂರು, ಎ.28: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಇಬ್ಬರು ಮುಖಂಡರನ್ನು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡುಬಿದಿರೆಯಲ್ಲಿ ಅಶ್ವಿನ್ ಪಿರೇರ ಹಾಗೂ ಬಂಟ್ವಾಳದಲ್ಲಿ ಇಬ್ರಾಹೀಂ ಕೈಲಾರ್ ಪಕ್ಷದ ನಿಯಮಾವಳಿಗೆ ವಿರುದ್ಧವಾಗಿ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ನಾಮಪತ್ರ ವಾಪಸ್ ಪಡೆಯುವಂತೆ ಸೂಚಿಸಿದರೂ ಅವರು ಹಿಂಪಡೆದಿಲ್ಲ. ಈ ವಿಚಾರವನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದ್ದು, ಅವರ ಸೂಚನೆಯಂತೆ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದರು.

ಬಂಟ್ವಾಳದಲ್ಲಿ ಜೆಡಿಎಸ್ ಬಲವಾಗಿಲ್ಲದ ಕಾರಣ ಅಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಆದರೆ ಇಬ್ರಾಹೀಂ ಕೈಲಾರ್ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದಾರೆ. ಇದು ಪಕ್ಷದ ನೀತಿ, ನಿಯಮಗಳಿಗೆ ವಿರೋಧವಾಗಿದೆ. ಹಾಗಾಗಿ ಅವರನ್ನು ಉಚ್ಚಾಟಿಸಲಾಗಿದೆ. ಮೂಡುಬಿದಿರೆ ಹಾಗೂ ಉಳ್ಳಾಲದಲ್ಲಿ ಪ್ರಬಲ ಸ್ಪರ್ಧೆ ಏರ್ಪಟ್ಟಿದ್ದು, ಇಲ್ಲಿಗೆ ಹೆಚ್ಚಿನ ಗಮನವಹಿಸಲಾಗಿದೆ ಎಂದರು.

ಮಾಜಿ ಸಚಿವ ಅಮರನಾಥ ಶೆಟ್ಟಿ ಮಾತನಾಡಿ, ಪಕ್ಷದ ವರಿಷ್ಠರು ಮೂಡುಬಿದಿರೆಯಿಂದ ನಾನೇ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದ್ದರೂ ಅನಾರೋಗ್ಯದ ಕಾರಣದಿಂದ ಸ್ಪರ್ಧಾ ಕಣದಿಂದ ದೂರ ಉಳಿದೆ. ಹಾಗಾಗಿ ಉದ್ಯಮಿ ಜೀವನ್ ಶೆಟ್ಟಿ ಅವರನ್ನು ಸೂಚಿಸಿದೆ. ಅಶ್ವಿನ್ ಜೊಸ್ಸಿ ಪಿರೇರ ಹಿಂದೊಮ್ಮೆ ಎಂಎಲ್‌ಎ ಬೇಡ ಎಂಎಲ್‌ಸಿ ಸ್ಥಾನ ದೊರಕಿಸಿ ಕೊಡಿ ಎಂದಿದ್ದರು. ಅದರಂತೆ ವರಿಷ್ಠರ ಜತೆ ಮಾತನಾಡಿ ಎಂಎಲ್‌ಸಿ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಕ್ಷೇತ್ರದಲ್ಲಿ ಪ್ರವಾಸವನ್ನೂ ನಡೆಸಿದ್ದರು. ಇದೀಗ ಎಂಎಲ್‌ಸಿ ಬೇಡ ಎಂಎಲ್‌ಎ ಸೀಟ್ ಕೊಡಿಸಿ ಎಂದು ಹೇಳುತ್ತಿದ್ದಾರೆ. ಇದಕ್ಕೆ ಒಪ್ಪದ ಕಾರಣ ಅವರು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ನಾಮಪತ್ರ ಹಿಂಪಡೆಯಲು ಸೂಚಿಸಿದಿರೂ ಹಿಂಪಡೆಯದ ಕಾರಣ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದರು.

ಮೂಡುಬಿದಿರೆಯಲ್ಲಿ ಅಶ್ವಿನ್ ಪಿರೇರ ತಾನು ಜೆಡಿಎಸ್‌ನಿಂದ ಸ್ಪರ್ಧಿಸುತ್ತಿರುವುದಾಗಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಜೆಡಿಎಸ್ ಅಧಿಕೃತ ಅಭ್ಯರ್ಥಿ ಜೀವನ್ ಶೆಟ್ಟಿ. ಮತದಾರರು ಯಾವುದೇ ಗೊಂದಲ ಮಾಡಿಕೊಳ್ಳಬಾರದು ಎಂದು ಅಮರನಾಥ ಶೆಟ್ಟಿ ಸ್ಪಷ್ಟಪಡಿಸಿದರು.

ಎ.29ರಂದು ದೇವೇಗೌಡ ಮಂಗಳೂರಿಗೆ
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ರವಿವಾರ (ಎ.29ರಂದು) ಮಂಗಳೂರಿಗೆ ಆಗಮಿಸಲಿದ್ದಾರೆ. ಜಿಲ್ಲೆಯಲ್ಲಿ ಪ್ರಚಾರ ನಡೆಸಲು ದಿನ ನಿಗದಿ ಮಾಡಲಿದ್ದಾರೆ. ಕುಮಾರ ಸ್ವಾಮಿಯವರೂ ಶೀಘ್ರದಲ್ಲೇ ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡಿ ಪಕ್ಷದ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಮಿತ್ರ ಪಕ್ಷದ ನಾಯಕರೂ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಮುಹಮ್ಮದ್ ಕುಂಞಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ವಸಂತ ಪೂಜಾರಿ, ಅಬೂಬಕರ್, ಮುಹಮ್ಮದ್ ಸಾಲಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News