×
Ad

ಪ್ರೊ.ಹರಿಕೃಷ್ಣ ಭರಣ್ಯರಿಗೆ ‘ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ’ ಪ್ರದಾನ

Update: 2018-04-28 17:59 IST

ಉಡುಪಿ, ಎ.28: ನಮ್ಮ ಸ್ವಂತ ಅನುಭವವನ್ನು ಬರವಣಿಗೆ ರೂಪಕ್ಕೆ ತಂದಾಗ ಮಾತ್ರ ನಾವು ಸೃಜನಶೀಲರಾಗಲು ಸಾಧ್ಯ. ಆದುದರಿಂದ ಸ್ವಂತಿಕೆಯೇ ಸೃಜನ ಶೀಲ ಸಾಹಿತ್ಯದ ಮೂಲವಾಗಿದೆ. ಕನ್ನಡ ನಮ್ಮ ಹೃದಯದ ಭಾಷೆ. ಮಾತೃ ಭಾಷೆಯಲ್ಲಿ ಮಾತ್ರ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯ ಎಂದು ಮದುರೈ ಕಾಮರಾಜ ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಹರಿಕೃಷ್ಣ ಭರಣ್ಯ ಹೇಳಿದ್ದಾರೆ.

ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಮಂಗಳೂರಿನ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ. ನಾವು ಏನೇ ಪಡೆದರೂ ಕೂಡ ಅದು ಕನ್ನಡದಿಂದ ಎಂಬುದನ್ನು ನೆನಪಿಸಿಕೊಳ್ಳಬೇಕು. ಎಲ್ಲ ರಲ್ಲಿಯೂ ಭಾಷಾ ಅಧ್ಯಯನ ಮಾಡುವ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಹೊರಗಿನ ಸಂಸ್ಕೃತಿಯನ್ನು ನಮ್ಮದಾಗಿಸಿಕೊಳ್ಳುವ ಬದಲು ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಅಪ್ಪಿಕೊಳ್ಳಬೇಕು. ಅದರ ಜೊತೆಗೆ ಈ ಎಲ್ಲ ವಿಚಾರ ಮತ್ತು ಧರ್ಮವನ್ನು ಗೌರವಿಸುವ ಗುಣವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ಅವರು ಅಭಿಪ್ರಾಯಪಟ್ಟರು.

ಮುಳಿಯರ ‘ನಾಡೋಜ ಪಂಪ’ ವಿಷಯದ ಕುರಿತು ನಿವೃತ್ತ ಪ್ರಾಂಶುಪಾಲ ಡಾ.ಪಾದೇಕಲ್ಲು ವಿಷ್ಣು ಭಟ್ ವಿಶೇಷ ಉಪನ್ಯಾಸ ನೀಡಿ, ಮುಳಿಯರ ಇದೇ ಹೆಸರಿನ ಕೃತಿ ಕನ್ನಡ ಸಾಹಿತ್ಯದ ಸಂಶೋಧನೆಯಲ್ಲೆ ಒಂದು ಮಹತ್ವದ ಮೈಲಿ ಗಲ್ಲು. ಅಂದು ಮುಳಿಯರು ಪ್ರತಿಪಾದಿಸಿದ ಅನೇಕ ವಿಷಯಗಳು ಇಂದು ಶಾಸನಗಳ ಮೂಲಕ ದೃಢೀಕರಿಸಲ್ಪಟ್ಟಿವೆ ಎಂದು ತಿಳಿಸಿದರು.

ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜ್ಯುಕೇಶನ್‌ನ ಕುಲಸಚಿವ ಡಾ.ನಾರಾಯಣ ಸಭಾಹಿತ್, ಮಣಿಪಾಲ ಅಕಾಡಮಿ ಆಫ್ ಜನರಲ್ ಎಜ್ಯು ಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್, ಪ್ರಶಸ್ತಿ ಸಮಿತಿಯ ಸದಸ್ಯೆ ಮನೋರಮಾ ಭಟ್ ಮುಖ್ಯ ಅತಿಥಿಗಳಾಗಿದ್ದರು. ರವಿಶಂಕರ್ ಜಿ. ಕಾಸರಗೋಡು ಅಭಿನಂದನಾ ಭಾಷಣ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News